ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದ ವ್ಯಾಪ್ತಿಯಲ್ಲಿರುವ ಎನ್.ಎಸ್.ಎಲ್ ಸಕ್ಕರೆ ಕಾರ್ಖಾನೆಯಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಸಕ್ಕರೆ ಉತ್ಪಾದನಾ ವಿಭಾಗದ ಕಂಟ್ರೋಲ್ ರೂಮ್ನಲ್ಲಿ ಎಸಿ ರಿಪೇರಿ ಮಾಡುವಾಗ ಆಕಸ್ಮಿಕವಾಗಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಓರ್ವ ಯುವಕ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದು, ಮತ್ತೊಬ್ಬ ತೀವ್ರವಾಗಿ ಗಾಯಗೊಂಡಿದ್ದಾನೆ.
ಎಸಿ ರಿಪೇರಿ ವೇಳೆ ಕಂಟಕವಾದ ಸಿಲಿಂಡರ್
ಮೈಸೂರು ಮೂಲದ ಖಾಸಗಿ ಸಂಸ್ಥೆಯೊಂದರ ಉದ್ಯೋಗಿಯಾಗಿದ್ದ ಮಹಮದ್ ಸಾದಿಕ್ (22) ಘಟನೆಯಲ್ಲಿ ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ. ಕಾರ್ಖಾನೆಯ ಕಂಟ್ರೋಲ್ ರೂಮ್ನಲ್ಲಿ ಎಸಿ ಸರಿಯಾಗಿ ಕೆಲಸ ಮಾಡದ ಹಿನ್ನೆಲೆಯಲ್ಲಿ ಮೈಸೂರಿನಿಂದ ತಂತ್ರಜ್ಞರನ್ನು ಕರೆಸಲಾಗಿತ್ತು. ಮಹಮದ್ ಸಾದಿಕ್ ತನ್ನ ಸಹೋದ್ಯೋಗಿಯೊಂದಿಗೆ ಎಸಿ ದುರಸ್ತಿ ಕಾರ್ಯದಲ್ಲಿ ನಿರತನಾಗಿದ್ದಾಗ ಗ್ಯಾಸ್ ಸಿಲಿಂಡರ್ ಅತಿಯಾದ ಒತ್ತಡದಿಂದ ಭಾರಿ ಸದ್ದಿನೊಂದಿಗೆ ಸ್ಫೋಟಗೊಂಡಿದೆ.
ಸ್ಥಳದಲ್ಲೇ ಕೊನೆಯುಸಿರೆಳೆದ ಯುವಕ
ಸಿಲಿಂಡರ್ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಕಂಟ್ರೋಲ್ ರೂಮ್ನಲ್ಲಿದ್ದ ಸಾಮಗ್ರಿಗಳು ಧ್ವಂಸಗೊಂಡಿದ್ದು, ಗಂಭೀರವಾಗಿ ಗಾಯಗೊಂಡ ಮಹಮದ್ ಸಾದಿಕ್ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಕೊನೆಯುಸಿರೆಳೆದಿದ್ದಾನೆ. ಇನ್ನು ಇವನ ಜತೆಯಲ್ಲಿದ್ದ ಮತ್ತೊಬ್ಬ ಕಾರ್ಮಿಕನಿಗೆ ಭಾರಿ ಪ್ರಮಾಣದ ಸುಟ್ಟ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ:
ಸ್ಥಳಕ್ಕೆ ಪೊಲೀಸರ ಭೇಟಿ
ಅವಘಡದ ಸುದ್ದಿ ತಿಳಿಯುತ್ತಿದ್ದಂತೆ ಕೊಪ್ಪ ಠಾಣೆಯ ಪೊಲೀಸರು ಕಾರ್ಖಾನೆಗೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳವನ್ನು ವೀಕ್ಷಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕಾರ್ಖಾನೆಯ ಒಳಗೆ ಎಸಿ ದುರಸ್ತಿ ಕಾರ್ಯದ ವೇಳೆ ಕೈಗೊಳ್ಳಬೇಕಿದ್ದ ಸುರಕ್ಷತಾ ಕ್ರಮಗಳಲ್ಲಿ ಲೋಪವಾಗಿದೆಯೇ ಎಂಬ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



