July 17, 2026
Friday, July 17, 2026
spot_img

ಬೆಳಗಾವಿ: ಕಳೆದ 15 ದಿನಗಳಿಂದ ಸಹ್ಯಾದ್ರಿ ನಗರದಲ್ಲಿ ಕರಂಟ್ ಕಟ್; ಹೆಸ್ಕಾಂ ವಿರುದ್ಧ ಸ್ಥಳೀಯ ನಿವಾಸಿಗಳ ಆಕ್ರೋಶ!

ಹೊಸದಿಗಂತ ವರದಿ ಬೆಳಗಾವಿ

​ಬೆಳಗಾವಿ : ಕಳೆದ 15 ದಿನಗಳಿಂದ ಸಹ್ಯಾದ್ರಿ ನಗರದ ಮಹಾಬಲೇಶ್ವರ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಕೆಲವು ದಿನ ಇಡೀ ದಿನವೇ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿದ್ದು, ಜನರು ಕತ್ತಲಲ್ಲಿ ದಿನದೂಡುವಂತಾಗಿದೆ.

ಟ್ರಾನ್ಸ್‌ಫಾರ್ಮರ್‌ಗಳಿಗೆ ಬೆಂಕಿ ನಿವಾಸಿಗಳಲ್ಲಿ ಆತಂಕ

​ವಿದ್ಯುತ್ ಇಲ್ಲದೆ ಬೀದಿ ದೀಪಗಳೂ ಬೆಳಗುತ್ತಿಲ್ಲ, ಇದರಿಂದಾಗಿ ಇಡೀ ಪ್ರದೇಶವೇ ಕತ್ತಲೆಯಲ್ಲಿ ಮುಳುಗಿದೆ. ಅಷ್ಟೇ ಅಲ್ಲದೆ, ಕಳೆದ ಕೆಲವು ದಿನಗಳಿಂದ ಪ್ರತಿದಿನ ಒಂದಲ್ಲ ಒಂದು ಟ್ರಾನ್ಸ್‌ಫಾರ್ಮರ್ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಳ್ಳುತ್ತಿರುವುದು ನಿವಾಸಿಗಳಲ್ಲಿ ಭೀತಿ ಮೂಡಿಸಿದೆ. ಜನವಸತಿ ಪ್ರದೇಶವಾಗಿದ್ದು, ಯಾವುದೇ ಕ್ಷಣದಲ್ಲಾದರೂ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇರುವುದರಿಂದ ಸ್ಥಳೀಯರು ಜೀವ ಕೈಯಲ್ಲಿ ಹಿಡಿದು ಬದುಕುವಂತಾಗಿದೆ.

ಸ್ಥಳೀಯರ ಅಳಲು

“ಕಳೆದ ಎರಡು ವಾರಗಳಿಂದ ನಮಗೆ ಸರಿಯಾಗಿ ನಿದ್ದೆಯೂ ಇಲ್ಲ, ನೆಮ್ಮದಿಯೂ ಇಲ್ಲ. ರಾತ್ರಿಯಿಡೀ ಕರೆಂಟ್ ಇರುವುದಿಲ್ಲ. ಬೀದಿ ದೀಪಗಳೂ ಇಲ್ಲದ ಕಾರಣ ಕಳ್ಳರ ಭಯವೂ ಶುರುವಾಗಿದೆ. ಪ್ರತಿದಿನ ಟ್ರಾನ್ಸ್‌ಫಾರ್ಮರ್‌ಗಳು ಬ್ಲಾಸ್ಟ್ ಆಗುತ್ತಿದ್ದರೆ ನಮ್ಮ ಸುರಕ್ಷತೆಯ ಗತಿ ಏನು?” ಎಂದು ಸ್ಥಳೀಯ ನಿವಾಸಿಯೊಬ್ಬರು ಹೊಸ ದಿಗಂತ ಪತ್ರಿಕೆಯೊಂದಿಗೆ ತಮ್ಮ  ಅಸಮಾಧಾನ ಹೊರಹಾಕಿದ್ದಾರೆ.

ಅಧಿಕಾರಿಗಳ ಗಮನಕ್ಕೆ ಸಾರ್ವಜನಿಕರ ಮನವಿ

​ಈ ಭಾಗದಲ್ಲಿ ಪದೇ ಪದೇ ಇಂತಹದ್ದೇ ಸಮಸ್ಯೆ ಎದುರಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಶಾಶ್ವತ ಪರಿಹಾರ ಕಂಡುಕೊಳ್ಳುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ದ  ಸಾರ್ವಜನಿಕರು ಗಂಭೀರವಾಗಿ ಅಸಮಾಧಾನ ಹೋರ ಹಾಕುತ್ತಿದ್ದಾರೆ.

ಹೆಸ್ಕಾಂ/ಕೆಇಬಿ ಅಧಿಕಾರಿಗಳಿಗೆ ಮನವಿ:

 ಕೂಡಲೇ ಹಳೆಯದಾದ ಮತ್ತು ದುರಸ್ತಿ ಸ್ಥಿತಿಯಲ್ಲಿರುವ ಟ್ರಾನ್ಸ್‌ಫಾರ್ಮರ್‌ಗಳನ್ನು ಬದಲಾಯಿಸಿ, ನಿರಂತರ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು.

ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಎಚ್ಚರಿಕೆ:

ಕತ್ತಲಲ್ಲಿ ಮುಳುಗಿರುವ ರಸ್ತೆಗಳಿಗೆ ತಕ್ಷಣವೇ ಬೀದಿ ದೀಪಗಳ ವ್ಯವಸ್ಥೆ ಮಾಡಿ ಸಾರ್ವಜನಿಕರ ಮತ್ತು ವಾಹನ ಸವಾರರ ಸುರಕ್ಷತೆಯನ್ನು ಖಾತ್ರಿಪಡಿಸಬೇಕು.

​ಸ್ಥಳೀಯ ನಿವಾಸಿಗಳು ಎದುರಿಸುತ್ತಿರುವ ಈ ಗಂಭೀರ ಸಮಸ್ಯೆಯನ್ನು ಮನಗಂಡು ಕೆಇಬಿ ಮತ್ತು ಪಾಲಿಕೆ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

 ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಮಹಾನಗರ ಪಾಲಿಕೆಯ ಹಾಗೂ ಹೆಸ್ಕಾಂ/ಕೆಇಬಿ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !