July 18, 2026
Saturday, July 18, 2026
spot_img

ಕಳಪೆ ಫಾರ್ಮ್ ಬೆನ್ನಲ್ಲೇ ರೋಹಿತ್ ಶರ್ಮಾ ನಿವೃತ್ತಿ ವದಂತಿ: ಕಪಿಲ್ ದೇವ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ನಿವೃತ್ತಿಯ ಕುರಿತಾದ ವದಂತಿಗಳ ಬೆನ್ನಲ್ಲೇ, ಭಾರತದ ಮಾಜಿ ದಿಗ್ಗಜ ನಾಯಕ ಕಪಿಲ್ ದೇವ್ ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. “ರೋಹಿತ್ ಶರ್ಮಾ ನಿವೃತ್ತಿಯ ಸಮಯ ಬಂದಾಗ ನಾವು ದುಃಖ ಪಡುವ ಅಗತ್ಯವಿಲ್ಲ, ಬದಲಿಗೆ ಅದನ್ನು ಸಂಭ್ರಮಿಸಬೇಕು” ಎಂದು ಹೇಳಿದ್ದಾರೆ.

ಕಪಿಲ್ ದೇವ್ ಕಾರ್ಯಕ್ರಮವೊಂದರ ಸಂದರ್ಭದಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆಯಲಿರುವ ಏಕದಿನ ಪಂದ್ಯವು ರೋಹಿತ್ ಶರ್ಮಾ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಲಿದೆಯೇ ಎಂಬ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಬದಲಾವಣೆ ಜಗದ ನಿಯಮ:

“ನಾವು ಯಾಕೆ ಬೇಸರಪಡಬೇಕು? ಸಂತೋಷವಾಗಿರೋಣ. ರೋಹಿತ್ ಇಷ್ಟು ವರ್ಷಗಳ ಕಾಲ ನಮಗೆ ಅಪಾರ ಸಂತೋಷವನ್ನು ನೀಡಿದ್ದಾರೆ. ಪ್ರತಿಯೊಬ್ಬರೂ ಒಂದು ದಿನ ವಿದಾಯ ಹೇಳಲೇಬೇಕು. ಸುನಿಲ್ ಗವಾಸ್ಕರ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಮತ್ತು ಸಚಿನ್ ತೆಂಡೂಲ್ಕರ್ ಅವರಂತಹ ದಿಗ್ಗಜರೇ ಕ್ರಿಕೆಟ್‌ನಿಂದ ದೂರಾಗಿದ್ದಾರೆ” ಎಂದು ಕಪಿಲ್ ನೆನಪಿಸಿದ್ದಾರೆ.

ಸಾಧನೆಯ ಸಂಭ್ರಮಾಚರಣೆ:

ರೋಹಿತ್ ಶರ್ಮಾ ಕೇವಲ ಭಾರತಕ್ಕಷ್ಟೇ ಅಲ್ಲದೆ ಜಗತ್ತಿನಾದ್ಯಂತದ ಕ್ರಿಕೆಟ್ ಅಭಿಮಾನಿಗಳಿಗೆ ಅದ್ಭುತ ಮನರಂಜನೆ ನೀಡಿದ್ದಾರೆ. ಹೀಗಾಗಿ ಅವರು ನಿವೃತ್ತಿ ಹೊಂದಿದಾಗ ಅವರ ಸುದೀರ್ಘ ವೃತ್ತಿಜೀವನ ಮತ್ತು ಸಾಧನೆಗಳನ್ನು ಕೊಂಡಾಡಬೇಕೇ ಹೊರತು ಬೇಸರಗೊಳ್ಳಬಾರದು ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.

ಶತಕದ ವಿದಾಯದ ಆಸೆ:

ಪ್ರಸ್ತುತ ನಾಯಕನಿಗೆ ಶುಭ ಹಾರೈಸಿರುವ ಕಪಿಲ್ ದೇವ್, “ಒಂದು ವೇಳೆ ಅವರು ಶೀಘ್ರದಲ್ಲೇ ನಿವೃತ್ತಿ ಪಡೆಯುತ್ತಿದ್ದರೆ, ಕೊನೆಯ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಅತ್ಯಂತ ಸ್ಟೈಲ್ ಆಗಿ ವಿದಾಯ ಹೇಳಲಿ ಎಂಬುದು ನನ್ನ ಆಸೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:

ರೋಹಿತ್ ಪ್ರಸ್ತುತ ಫಾರ್ಮ್:

39 ವರ್ಷದ ರೋಹಿತ್ ಶರ್ಮಾ ಈಗಾಗಲೇ ಟಿ20 ಮತ್ತು ಟೆಸ್ಟ್ ಕ್ರಿಕೆಟ್ ಮಾದರಿಗಳಿಂದ ದೂರ ಸರಿದಿದ್ದಾರೆ. ಸದ್ಯ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅವರ ಬ್ಯಾಟಿಂಗ್ ಫಾರ್ಮ್ ಕೊಂಚ ಕೈಕೊಟ್ಟಿರುವುದು ಈ ನಿವೃತ್ತಿಯ ಚರ್ಚೆಗಳು ವೇಗ ಪಡೆದುಕೊಳ್ಳಲು ಕಾರಣವಾಗಿದೆ. ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಅವರು ಕೇವಲ 11 ಮತ್ತು 26 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ವರ್ಷ ಆಡಿರುವ 8 ಪಂದ್ಯಗಳಲ್ಲಿ 30.12 ರ ಸರಾಸರಿಯಲ್ಲಿ 241 ರನ್ ಗಳಿಸಿದ್ದು, 79 ರನ್ ಇವರ ಗರಿಷ್ಠ ಸ್ಕೋರ್ ಆಗಿದೆ. ರೋಹಿತ್ ಜೂನ್ 23, 2007 ರಂದು ಐರ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !