July 18, 2026
Saturday, July 18, 2026
spot_img

ಚಿತ್ರದುರ್ಗದಲ್ಲಿ ಹೆಮ್ಮಾರಿ ಡೆಂಗ್ಯೂ ನಿಯಂತ್ರಣಕ್ಕೆ ಮಾಸ್ಟರ್ ಪ್ಲಾನ್; ಮನೆ ಮನೆ ಸಮೀಕ್ಷೆಗೆ ಅಧಿಕಾರಿಗಳು ಸಾಥ್

ಹೊಸದಿಗಂತ ವರದಿ ಚಿತ್ರದುರ್ಗ

ನಗರದಲ್ಲಿ ಡೆಂಗ್ಯೂ ಹಾಗೂ ಚಿಕೂನ್‌ಗುನ್ಯಾ ರೋಗಗಳ ನಿಯಂತ್ರಣಕ್ಕಾಗಿ ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶುಕ್ರವಾರದಂದು ವಿಶೇಷ ಲಾರ್ವಾ ಸಮೀಕ್ಷಾ ತಂಡಗಳು ಮನೆ ಮನೆಗೆ ಭೇಟಿ ನೀಡಿ ತಪಾಸಣೆ ನಡೆಸುತ್ತಿವೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಈ ಕಾರ್ಯಕ್ರಮದ ಕಟ್ಟುನಿಟ್ಟಿನ ಮೇಲ್ವಿಚಾರಣೆಗಾಗಿ ಅಧಿಕಾರಿಗಳ ತಂಡ ನಗರದ ವಿವಿಧ ಬಡಾವಣೆಗಳಲ್ಲಿ ಶುಕ್ರವಾರ ಪರಿಶೀಲನೆ ನಡೆಸಿತು.

ನಗರದ ಬುದ್ಧನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಪರಿಶೀಲನಾ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣ ನಾಯಕ್ ಪಾಲ್ಗೊಂಡು ತಂಡಗಳ ಕಾರ್ಯವೈಖರಿ ಪರಿಶೀಲಿಸಿದರು.

“ಕೀಟಜನ್ಯ ರೋಗಗಳ ಲಕ್ಷಣಗಳು ಕಂಡುಬಂದಲ್ಲಿ ನಿರ್ಲಕ್ಷಿಸಬಾರದು. ಯಾವುದೇ ರೀತಿಯ ಜ್ವರವಿರಲಿ, ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆ ಅಥವಾ ಆರೋಗ್ಯ ಸಿಬ್ಬಂದಿಯನ್ನು ಸಂಪರ್ಕಿಸಿ ರಕ್ತ ತಪಾಸಣೆ ಮಾಡಿಸಿಕೊಳ್ಳಬೇಕು”ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣ ನಾಯಕ್ ಸಲಹೆ ನೀಡಿದರು.

ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗೋವಿಂದರಡ್ಡಿ ಕೊಣ್ಣೂರ ಮಾತನಾಡಿ, “ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾ ರೋಗಗಳು ಇಡೀಸ್ ಈಜಿಪ್ಟ್ ಎಂಬ ಸೋಂಕಿತ ಹೆಣ್ಣು ಸೊಳ್ಳೆಯ ಕಚ್ಚುವಿಕೆಯಿಂದ ಹರಡುತ್ತವೆ. ಈ ಸೊಳ್ಳೆಗಳು ತಂಪಾದ ಹಾಗೂ ಸ್ವಚ್ಛವಾದ ನಿಂತ ನೀರಿನಲ್ಲಿ ಮೊಟ್ಟೆಯಿಡುತ್ತವೆ. ಕೇವಲ ೨೫ ರಿಂದ ೩೦ ದಿನಗಳ ಜೀವಿತಾವಧಿಯಲ್ಲಿ ಇವು ೫-೬ ಬಾರಿ ಸುಮಾರು ೧೫೦ ರಿಂದ ೨೦೦ ಮೊಟ್ಟೆಗಳನ್ನು ಇಡುತ್ತವೆ. ಐದಾರು ದಿನಗಳಲ್ಲಿ ಇವು ನಾಲ್ಕು ಹಂತಗಳನ್ನು ದಾಟಿ ಸೊಳ್ಳೆಗಳಾಗಿ ಮಾರ್ಪಡುತ್ತವೆ ಎಂದು ವಿವರಿಸಿದರು.

ಇದನ್ನೂ ಓದಿ:

ಸಾರ್ವಜನಿಕರು ತಮ್ಮ ಮನೆಯಲ್ಲಿ ನೀರು ಸಂಗ್ರಹಿಸುವ ಡ್ರಮ್, ಬ್ಯಾರಲ್ ಹಾಗೂ ಸಿಮೆಂಟ್ ತೊಟ್ಟಿಗಳನ್ನು ನಿಯಮಿತವಾಗಿ ಚೆನ್ನಾಗಿ ತಿಕ್ಕಿ ತೊಳೆದು, ಒಣಗಿಸಿ ಆ ಬಳಿಕವಷ್ಟೇ ಹೊಸ ನೀರನ್ನು ತುಂಬಿಸಬೇಕು. ಮಳೆಗಾಲವಾಗಿರುವುದರಿಂದ ಮನೆಯ ಸುತ್ತಮುತ್ತ ಯಾವುದೇ ಘನ ತ್ಯಾಜ್ಯ ವಸ್ತುಗಳಲ್ಲಿ ನೀರು ನಿಲ್ಲದಂತೆ ಸೂಕ್ತ ವಿಲೇವಾರಿ ಮಾಡಬೇಕು. ನಿಂತ ನೀರು ಸೊಳ್ಳೆಗಳ ತವರೂರಾಗಿದ್ದು, ಕೀಟ ಚಿಕ್ಕದಾದರೂ ಅದರ ಕಾಟ ದೊಡ್ಡದಾಗಿರುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಮಹೇಶ್, ಲಾರ್ವಾ ಸಮೀಕ್ಷಾ ತಂಡದ ಸದಸ್ಯರು ಹಾಗೂ ಬಡಾವಣೆಯ ಸಾರ್ವಜನಿಕರು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !