July 21, 2026
Tuesday, July 21, 2026
spot_img

ಅಂತಾರಾಷ್ಟ್ರೀಯ ಒಲಿಂಪಿಯಾಡ್‌ನಲ್ಲಿ ಭಾರತದ ವಿದ್ಯಾರ್ಥಿಗಳ ಚಿನ್ನದ ಸಾಧನೆ: ಪ್ರಧಾನಿ ಮೋದಿ ಅಭಿನಂದನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಂತಾರಾಷ್ಟ್ರೀಯ ವಿಜ್ಞಾನ ಒಲಿಂಪಿಯಾಡ್‌ಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ಮತ್ತೊಮ್ಮೆ ವಿಶ್ವ ಮಟ್ಟದಲ್ಲಿ ತಮ್ಮ ಪ್ರತಿಭೆ ಮೆರೆದಿದ್ದಾರೆ. ರಸಾಯನಶಾಸ್ತ್ರ, ಜೀವಶಾಸ್ತ್ರ ಹಾಗೂ ಭೌತಶಾಸ್ತ್ರ ವಿಭಾಗಗಳಲ್ಲಿ ಪದಕಗಳ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದು, ಯುವ ವಿಜ್ಞಾನಿಗಳಿಗೆ ಇದು ದೊಡ್ಡ ಪ್ರೇರಣೆಯಾಗಲಿದೆ ಎಂದು ಹೇಳಿದ್ದಾರೆ.

ರಸಾಯನಶಾಸ್ತ್ರದಲ್ಲಿ ಐತಿಹಾಸಿಕ ಸಾಧನೆ

ಉಜ್ಬೇಕಿಸ್ತಾನದ ತಾಶ್ಕೆಂಟ್‌ನಲ್ಲಿ ನಡೆದ 58ನೇ ಅಂತಾರಾಷ್ಟ್ರೀಯ ರಸಾಯನಶಾಸ್ತ್ರ ಒಲಿಂಪಿಯಾಡ್‌ನಲ್ಲಿ ಭಾರತದ ನಾಲ್ವರು ವಿದ್ಯಾರ್ಥಿಗಳಾದ ದೇಬದತ್ತ ಪ್ರಿಯದರ್ಶಿ, ಹರ್ಷಿತ್ ಸಿಂಘಲ್, ಕಬೀರ್ ಛಿಲ್ಲರ್ ಮತ್ತು ಸಂದೀಪ್ ಕುಚಿ ಚಿನ್ನದ ಪದಕ ಗೆದ್ದಿದ್ದಾರೆ. ಈ ಸಾಧನೆಯೊಂದಿಗೆ ಭಾರತ ಚೀನಾ, ವಿಯೆಟ್ನಾಂ ಸೇರಿದಂತೆ ಅಗ್ರ ರಾಷ್ಟ್ರಗಳೊಂದಿಗೆ ಜಂಟಿ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಇದನ್ನೂ ಓದಿ:

ಜೀವಶಾಸ್ತ್ರದಲ್ಲೂ ಪದಕಗಳ ಸಾಧನೆ

ಲಿಥುವೇನಿಯಾದಲ್ಲಿ ನಡೆದ 37ನೇ ಅಂತಾರಾಷ್ಟ್ರೀಯ ಜೀವಶಾಸ್ತ್ರ ಒಲಿಂಪಿಯಾಡ್‌ನಲ್ಲಿ ಭಾರತದ ನಾಲ್ವರು ವಿದ್ಯಾರ್ಥಿಗಳು ಪದಕ ಗೆದ್ದಿದ್ದಾರೆ. ಭವ್ಯಾ ಗುನ್ವಾಲ್ ಚಿನ್ನದ ಪದಕ ಪಡೆದರೆ, ಸೌಮಿಲ್ ಮೈತಿ, ನಿಶಿತ್ ಕಲಾನಿ ಹಾಗೂ ಅನ್ಮೋಲ್ ಕುಮಾರ್ ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಭೌತಶಾಸ್ತ್ರದಲ್ಲೂ ಭಾರತ ನಂ.1

ಇದಕ್ಕೂ ಮುನ್ನ ಕೊಲಂಬಿಯಾದಲ್ಲಿ ನಡೆದ 56ನೇ ಅಂತಾರಾಷ್ಟ್ರೀಯ ಭೌತಶಾಸ್ತ್ರ ಒಲಿಂಪಿಯಾಡ್‌ನಲ್ಲಿ ಭಾರತದ ಐವರು ವಿದ್ಯಾರ್ಥಿಗಳು ಚಿನ್ನದ ಪದಕ ಗೆದ್ದು ದೇಶಕ್ಕೆ ಜಾಗತಿಕ ಮಟ್ಟದಲ್ಲಿ ಅಗ್ರ ಸ್ಥಾನ ತಂದುಕೊಟ್ಟಿದ್ದರು.

ಮೋದಿ ಅಭಿನಂದನೆ

ಈ ಸಾಧನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತದ ಯುವ ಪ್ರತಿಭೆಗಳು ವಿಶ್ವ ವೇದಿಕೆಯಲ್ಲಿ ದೇಶದ ಕೀರ್ತಿ ಹೆಚ್ಚಿಸುತ್ತಿದ್ದು, ಅವರ ಪರಿಶ್ರಮ ಮತ್ತು ವಿಜ್ಞಾನಾಸಕ್ತಿ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿದೆ ಎಂದು ಅಭಿನಂದಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !