ತೂಕ ಇಳಿಸುವ ಡಯಟ್‌ನಲ್ಲಿದ್ದರೂ ಸಿಹಿ ತಿನ್ನಬೇಕೆಂಬ ಆಸೆ ಸಹಜ. ಅಂತಹ ಸಮಯದಲ್ಲಿ ಆರೋಗ್ಯಕರ ಹಾಗೂ ಪ್ರೋಟೀನ್ ಸಮೃದ್ಧ ಪನೀರ್ ತಿರಮಿಸು ಉತ್ತಮ ಆಯ್ಕೆಯಾಗಬಹುದು. ಮೈದಾ, ರಿಫೈನ್ಡ್ ಸಕ್ಕರೆ ಮತ್ತು ಹೆವಿ ಕ್ರೀಮ್ ಇಲ್ಲದೆ ಮಾಡುವ ಈ ಡೆಸರ್ಟ್ ಹೊಟ್ಟೆ ತುಂಬಿದ ಅನುಭವ ನೀಡುವುದರ ಜೊತೆಗೆ ಸಿಹಿ ತಿನ್ನುವ ಆಸೆಯನ್ನೂ ಆರೋಗ್ಯಕರವಾಗಿ ತಣಿಸುತ್ತದೆ.
ಬೇಕಾಗುವ ಸಾಮಗ್ರಿಗಳು
ಪನೀರ್ – 200 ಗ್ರಾಂ
ಗ್ರೀಕ್ ಯೋಗರ್ಟ್ ಅಥವಾ ಗಟ್ಟಿಯಾದ ಮೊಸರು – ½ ಕಪ್
ಜೇನುತುಪ್ಪ – 1–2 ಟೇಬಲ್ ಸ್ಪೂನ್
ವೆನಿಲ್ಲಾ ಎಸೆನ್ಸ್ – ½ ಟೀ ಸ್ಪೂನ್
ಬ್ಲ್ಯಾಕ್ ಕಾಫಿ – ½ ಕಪ್
ರಸ್ಕ್ – 4–5
ಕೋಕೋ ಪೌಡರ್ – 1 ಟೀ ಸ್ಪೂನ್
ಮಾಡುವ ವಿಧಾನ
ಮೊದಲು ಪನೀರ್, ಗ್ರೀಕ್ ಯೋಗರ್ಟ್, ಜೇನುತುಪ್ಪ ಮತ್ತು ವೆನಿಲ್ಲಾ ಎಸೆನ್ಸ್ ಅನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿ ಕ್ರೀಮ್ ತಯಾರಿಸಿಕೊಳ್ಳಿ. ಬಳಿಕ ರಸ್ಕ್ಅನ್ನು ತಣ್ಣಗಾದ ಬ್ಲ್ಯಾಕ್ ಕಾಫಿಯಲ್ಲಿ 2–3 ಸೆಕೆಂಡ್ ಮಾತ್ರ ಅದ್ದಿ ತೆಗೆದುಕೊಳ್ಳಿ.
ಈಗ ಒಂದು ಗ್ಲಾಸ್ ಅಥವಾ ಡೆಸರ್ಟ್ ಬೌಲ್‌ನಲ್ಲಿ ಮೊದಲು ಕಾಫಿಯಲ್ಲಿ ಅದ್ದಿದ ರಸ್ಕ್‌ನ ಪದರವನ್ನು ಹಾಕಿ. ಅದರ ಮೇಲೆ ಪನೀರ್ ಕ್ರೀಮ್ ಹರಡಿ. ಇದೇ ರೀತಿ ಮತ್ತೊಮ್ಮೆ ಪದರಗಳನ್ನು ಹಾಕಿ. ಕೊನೆಯಲ್ಲಿ ಕೋಕೋ ಪೌಡರ್ ಅನ್ನು ಮೇಲಿಂದ ಹಾಕಿ. ನಂತರ 2–3 ಗಂಟೆಗಳ ಕಾಲ ಫ್ರಿಜ್‌ನಲ್ಲಿ ಇಟ್ಟು ತಣ್ಣಗಾದ ಬಳಿಕ ಸವಿಯಿರಿ.



