ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಯಲ್ ಸ್ಟಾರ್ ಉಪೇಂದ್ರ ಅವರು ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ‘ಯುಐ’ ಸಿನಿಮಾದ ನಂತರ ಅವರು ಕೇವಲ ನಟನೆಯತ್ತ ಮಾತ್ರ ಗಮನ ಹರಿಸಿದ್ದರು. ಹೀಗಾಗಿ, “ಉಪ್ಪಿ ಮತ್ತೆ ನಿರ್ದೇಶನ ಮಾಡುವುದು ಯಾವಾಗ?” ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಈಗ ಆ ಎಲ್ಲಾ ಪ್ರಶ್ನೆಗಳಿಗೆ ಸ್ವತಃ ಉಪೇಂದ್ರ ಅವರೇ ಸಿಹಿಸುದ್ದಿಯ ಮೂಲಕ ಉತ್ತರ ನೀಡಿದ್ದಾರೆ.
ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಉಪೇಂದ್ರ ತಮ್ಮ ಮುಂದಿನ ನಿರ್ದೇಶನದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. “ಸದ್ಯ ನಾನು ಹೊಸ ಕಥೆಯ ಬರವಣಿಗೆಯಲ್ಲಿ ತೊಡಗಿದ್ದೇನೆ. ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ. ಈಗ ಒಪ್ಪಿಕೊಂಡಿರುವ ಎರಡು ಸಿನಿಮಾಗಳ ಕೆಲಸ ಮುಗಿದ ತಕ್ಷಣ ನನ್ನ ನಿರ್ದೇಶನದ ಸಿನಿಮಾ ಶುರುವಾಗಲಿದೆ. ಸಿನಿಮಾ ಘೋಷಣೆಯಾದ ತಕ್ಷಣ ಕಥೆಯ ಸುಳಿವು ನಿಮಗೆ ಸಿಗಲಿದೆ” ಎಂದು ಉಪ್ಪಿ ಹೇಳಿದ್ದಾರೆ. ಈ ಮಾತು ಕೇಳಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.
ಇದೇ ಸಂದರ್ಭದಲ್ಲಿ ತಮ್ಮ ಮಗ ಆಯುಷ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ಬಗ್ಗೆಯೂ ಉಪೇಂದ್ರ ಮಾಹಿತಿ ಹಂಚಿಕೊಂಡಿದ್ದಾರೆ. ಮಗನ ಮೊದಲ ಸಿನಿಮಾದ ಕಥೆಯ ಚರ್ಚೆಯಲ್ಲಿ ಉಪ್ಪಿ ಕೂಡ ಭಾಗಿಯಾಗಿದ್ದಾರೆ. ವಿಶೇಷವೆಂದರೆ, ಈ ಚಿತ್ರಕ್ಕೆ ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದ ಮೂಲಕ ಪ್ರಿಯಾಂಕಾ ಅವರು ನಿರ್ದೇಶಕಿಯಾಗಿ ಹೊಸ ಹೆಜ್ಜೆ ಇಡುತ್ತಿರುವುದು ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ವಿಶೇಷ ಖುಷಿ ತಂದಿದೆ.
ಸದ್ಯ ಉಪೇಂದ್ರ ನಟನೆಯಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಅವರ ಹೊಸ ಸಿನಿಮಾದಲ್ಲಿ ಉಪ್ಪಿ ನಟಿಸುತ್ತಿದ್ದು, ಚಿತ್ರೀಕರಣಕ್ಕಾಗಿ ಚಿಕ್ಕಮಗಳೂರಿನಿಂದ ಕೊಡೈಕೆನಾಲ್‌ಗೆ ತೆರಳಿದ್ದಾರೆ. ಹುಲಿವೇಷ ಕಲೆಯ ಹಿನ್ನೆಲೆಯುಳ್ಳ ಈ ಚಿತ್ರ ನೇರವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ಪ್ರಭುದೇವ ಮತ್ತು ಅಥರ್ವ ಕೂಡ ಬಣ್ಣ ಹಚ್ಚಿದ್ದು, ಬರೋಬ್ಬರಿ 24 ವರ್ಷಗಳ ಬಳಿಕ ಉಪ್ಪಿ ಮತ್ತು ಪ್ರಭುದೇವ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
ಇದರ ಜೊತೆಗೆ ಕನ್ನಡದಲ್ಲಿ ‘ನೆಕ್ಸ್ಟ್ ಲೆವೆಲ್’ ಎಂಬ ಸಿನಿಮಾವನ್ನೂ ಉಪೇಂದ್ರ ಒಪ್ಪಿಕೊಂಡಿದ್ದಾರೆ. ಅರವಿಂದ್ ಕೌಶಿಕ್ ನಿರ್ದೇಶನದ, ತರುಣ್ ಶಿವಪ್ಪ ನಿರ್ಮಾಣದ ಈ ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ಮೂಡಿಬರಲಿದೆ. ಆರಾಧನಾ ರಾಮ್ ನಾಯಕಿಯಾಗಿ ನಟಿಸುತ್ತಿದ್ದು, ಇದೇ ಮೊದಲ ಬಾರಿಗೆ ತಮ್ಮ ಸಹೋದರನ ಪುತ್ರ ನಿರಂಜನ್ ಸುಧೀಂದ್ರ ಜೊತೆ ಉಪ್ಪಿ ತೆರೆ ಹಂಚಿಕೊಳ್ಳುತ್ತಿದ್ದಾರೆ.



