ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್‌ನ ಪ್ರಮುಖ ಬಂದರು ನಗರ ಒಡೆಸಾ ಸಮೀಪ ವ್ಯಾಪಾರ ಹಡಗಿನ ಮೇಲೆ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕೇರಳದ ಕಾಸರಗೋಡಿನ ಯುವ ನಾವಿಕ ಸೇರಿ ನಾಲ್ವರು ಭಾರತೀಯರು ಸಾವನ್ನಪ್ಪಿದ್ದಾರೆ. ಕಾಸರಗೋಡು ಜಿಲ್ಲೆಯ ಯುವಕನನ್ನು ವೆಳ್ಳರಿಕುಂಡು ಸಮೀಪದ ಎಕೆಜಿ ನಗರದ ನಿವಾಸಿ ವಾಲಿಪ್ಲಾಕಲ್ ಜೋಯ್ ಮತ್ತು ಸಾಲಿ ದಂಪತಿಯ ಏಕಮಾತ್ರ ಪುತ್ರ ಅಖಿಲ್ ಜೋಯೆಲ್ (26) ಮೃತಪಟ್ಟ ದುರ್ದೈವಿ.
ಮಾಹಿತಿಯ ಪ್ರಕಾರ, ಗಿನಿ-ಬಿಸ್ಸಾವ್ ಧ್ವಜ ಹೊಂದಿದ್ದ ಗೋಲ್ಡನ್ ಲಿಯೋ ಎಂಬ ವಾಣಿಜ್ಯ ಹಡಗು ಉಕ್ರೇನ್‌ನ ಒಡೆಸಾ ಬಂದರಿನಿಂದ ಹೊರಟಿದ್ದ ವೇಳೆ ರಷ್ಯಾ ಕ್ಷಿಪಣಿ ದಾಳಿಗೆ ಗುರಿಯಾಯಿತು. ದಾಳಿಯ ಸಮಯದಲ್ಲಿ ಹಡಗಿನಲ್ಲಿ ಭಾರತೀಯ ಹಾಗೂ ಸಿರಿಯನ್ ಮೂಲದ ಸಿಬ್ಬಂದಿ ಕರ್ತವ್ಯದಲ್ಲಿದ್ದರು. ಈ ಭೀಕರ ದಾಳಿಯಲ್ಲಿ ನಾಲ್ವರು ಭಾರತೀಯರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಭಾರತೀಯ ನಾವಿಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದನ್ನೂ ಓದಿ:
ಮದುವೆ ಸಿದ್ಧತೆಯಲ್ಲಿದ್ದ ಯುವಕನ ಬದುಕು ದುರಂತ ಅಂತ್ಯ
ಅಚಲ್ ಜೋಯೆಲ್ ಕಳೆದ ಏಳು ವರ್ಷಗಳಿಂದ ಮರ್ಚೆಂಟ್ ನೇವಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಎರಡು ತಿಂಗಳ ಹಿಂದಷ್ಟೇ ರಜೆಯ ಮೇಲೆ ಊರಿಗೆ ಬಂದಿದ್ದ ಅವರು, ಈ ಅವಧಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮುಂದಿನ ವರ್ಷ ಏಪ್ರಿಲ್‌ನಲ್ಲಿ ಮದುವೆ ನಡೆಸುವ ಸಿದ್ಧತೆಯೂ ಕುಟುಂಬದಲ್ಲಿ ನಡೆಯುತ್ತಿತ್ತು.
ಕ್ರೀಡಾಪಟುವಾಗಿಯೂ ಗುರುತಿಸಿಕೊಂಡಿದ್ದ ಅಚಲ್ ಜೋಯೆಲ್, ಹಗ್ಗಜಗ್ಗಾಟ ಸ್ಪರ್ಧೆಗಳಲ್ಲಿ ಹಲವು ಸಾಧನೆಗಳನ್ನು ಮಾಡಿದ್ದರು. ರೋಪ್ ಪುಲ್ ವಿಭಾಗದಲ್ಲಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ದಾಖಲೆಯನ್ನೂ ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದರು.



