ಹೊಸದಿಗಂತ ವರದಿ ಅಂಕೋಲಾ:
ತಾಲೂಕಿನ ಕೇಣಿಯಲ್ಲಿ ಉದ್ದೇಶಿತ ವಾಣಿಜ್ಯ ಬಂದರು ಯೋಜನೆಯ ವಿರುದ್ಧ ವಾಣಿಜ್ಯ ಬಂದರು ತೊಲಗಿಸಿ ಅಂಕೋಲಾ ಉತ್ತರ ಕನ್ನಡ ಉಳಿಸಿ ವೇದಿಕೆಯ ವತಿಯಿಂದ ಅಂಕೋಲಾದಿಂದ ಕಾರವಾರ ಜಿಲ್ಲಾಧಿಕಾರಿ ಕಚೇರಿಗೆ ಸಾಂಕೇತಿಕ ಪಾದಯಾತ್ರೆಗೆ ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನದ ಆವರಣದಲ್ಲಿ ಚಾಲನೆ ನೀಡಲಾಯಿತು.
ಸ್ವಾತಂತ್ರ್ಯ ಹೋರಾಟದ ಐತಿಹಾಸಿಕ ಮಹತ್ವ ಹೊಂದಿರುವ ಗಾಂಧೀ ಮೈದಾನದ ಸ್ವರ್ಣ ಉದ್ಯಾನದಲ್ಲಿರುವ ಮಹಾತ್ಮಾ ಗಾಂಧೀಜಿಯವರ ಪ್ರತಿಮೆಗೆ ಸಾಗರ ವಿಜ್ಞಾನ ವಿಶ್ರಾಂತ ಪ್ರಾಧ್ಯಾಪಕ ವಿ.ಎನ್.ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗೆ ನಾಟಿ ವೈದ್ಯ ಹನುಮಂತ ಗೌಡ ಮಾಲಾರ್ಪಣೆ ಮಾಡಿ ಪಾದಯಾತ್ರೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಹೋರಾಟ ವೇದಿಕೆಯ ಪ್ರಮುಖ ಸಂಜೀವ ಬಲೆಗಾರ ಮಾತನಾಡಿ ಶಾಂತಿ,
ಅಹಿಂಸೆಯಿಂದ ಬ್ರಿಟಿಷರ ವಿರುದ್ಧ ಹೋರಾಟ,ಸತ್ಯಾಗ್ರಹ ನಡೆಸಿದ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರರ ಪುಣ್ಯಭೂಮಿಯಲ್ಲಿ ಸ್ಥಳೀಯ ಜನರು ತಮ್ಮ ಅಸ್ತಿತ್ವಕ್ಕಾಗಿ,ನೆಲ ಜಲದ ರಕ್ಷಣೆಗಾಗಿ ಶಾಂತಿಯುತ
ಹೋರಾಟವನ್ನೇ ನಡೆಸುತ್ತಿದ್ದು ಗೆಲುವು ದೊರಕುವ ವರೆಗೆ ಹೋರಾಟ ಮುಂದುವರಿಯಲಿದೆ ಎಂದರು.
ಸ್ಪಂದನ ಫೌಂಡೇಶನ್ ಪ್ರಮುಖ ಗೋಪಾಲಕೃಷ್ಣ ನಾಯಕ, ಹಿರಿಯ ವೈದ್ಯ ವೆಂಕಟೇಶ ಕೇಣಿಕರ್,ಸಂದೀಪ ಬಂಟ, ಉದಯ ನಾಯಕ,ಪ್ರಮೋದ ಬಾನಾವಳಿಕರ ಸೇರಿದಂತೆ ಮೀನುಗಾರ ಮುಖಂಡರು,
ರೈತ ಮುಖಂಡರು ಹೋರಾಟ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು. ಸ್ವಾತಂತ್ರ್ಯಸಂಗ್ರಾಮ ಸ್ಮಾರಕ ಭವನದ ಆವರಣದಲ್ಲಿ ಮಹಿಳೆಯರೂ ಸೇರಿದಂತೆ ಸಾವಿರದಷ್ಟು ಜನರು ಜಮಾಯಿಸಿದ್ದರು ಆದರೆ ಬಾಳೆಗುಳಿಯ ವರೆಗೆ ಪಾದಯಾತ್ರೆ ಹೊರಡಲು ನೂರು ಜನರಿಗೆ ಮಾತ್ರ ಅವಕಾಶ ನೀಡಲಾಗಿದ್ದರಿಂದ ಉಳಿದವರು ವಿವಿಧ ವಾಹನಗಳಲ್ಲಿ ಕಾರವಾರ ಕ್ಕೆ ತೆರಳಿದರು.
ಡಿ.ವೈ.ಎಸ್.ಪಿ ಗಿರೀಶ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.



