September 20, 2026
Sunday, September 20, 2026
spot_img

ಮುಗಿಯದ ಟಿ. ನರಸೀಪುರ ಗಣಪತಿ ಹೈಡ್ರಾಮಾ: ಇನ್ಸ್ಪೆಕ್ಟರ್ ಜತೆ ಕಿರಿಕ್, ಪ್ರಚೋದನಕಾರಿ ಭಾಷಣ: ಪ್ರತಾಪ್ ಸಿಂಹ ವಿರುದ್ಧ FIR

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟಿ. ನರಸೀಪುರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ಆರಂಭವಾದ ವಿವಾದವು ಈಗ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಎಫ್‌ಐಆರ್ (FIR) ದಾಖಲಾಗುವ ಹಂತಕ್ಕೆ ತಲುಪಿದೆ.

ಶುಕ್ರವಾರ ನಡೆದ ಶೋಭಾಯಾತ್ರೆಯ ವೇಳೆ ಸಾರ್ವಜನಿಕ ಶಾಂತಿ ಕದಡಿದ ಮತ್ತು ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಟಿ. ನರಸೀಪುರ ಠಾಣೆ ಪೊಲೀಸರು ಸ್ವಯಂ ಪ್ರೇರಿತವಾಗಿ ಕೇಸ್ ದಾಖಲಿಸಿಕೊಂಡಿದ್ದಾರೆ. ಈ ಪೊಲೀಸ್ ಕ್ರಮಕ್ಕೆ ಮೈಸೂರು ಕಾಂಗ್ರೆಸ್ ನಾಯಕರು ನೀಡಿದ್ದ ದೂರು ಕೂಡ ಕಾರಣವಾಗಿದೆ.

ಇನ್ಸ್‌ಪೆಕ್ಟರ್‌ಗೆ ಏಕವಚನದಲ್ಲಿ ಕ್ಲಾಸ್

ಗಣೇಶೋತ್ಸವದ ಮೆರವಣಿಗೆಗೆ ಪೊಲೀಸರು ಕೆಲವು ನಿರ್ಬಂಧಗಳನ್ನು ವಿಧಿಸಿದ್ದರು ಎನ್ನಲಾಗಿದೆ. ಇದಕ್ಕೆ ಸೆಡ್ಡು ಹೊಡೆದ ಹಿಂದೂ ಮಹಾಸಭಾ ಮತ್ತು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಪ್ರತಾಪ್ ಸಿಂಹ ನೇತೃತ್ವದಲ್ಲಿ ಶೋಭಾಯಾತ್ರೆ ನಡೆಸಿದ್ದರು. ಮಸೀದಿಯೊಂದರ ಮುಂಭಾಗದಲ್ಲಿ ಮೆರವಣಿಗೆಯನ್ನು ನಿಲ್ಲಿಸಿ ಭಾಷಣ ಮಾಡಿದ್ದ ಪ್ರತಾಪ್ ಸಿಂಹ, ಸ್ಥಳೀಯ ಇನ್ಸ್‌ಪೆಕ್ಟರ್ ವಿರುದ್ಧ ಏಕವಚನದಲ್ಲೇ ಮಾತನಾಡಿದಲ್ಲದೇ, ಮುಂದಿನ ಒಂದೂವರೆ ವರ್ಷದಲ್ಲಿ ನಮ್ಮ ಸರ್ಕಾರ ಬಂದಾಗ ಲೆಕ್ಕ ಚುಕ್ತಾ ಮಾಡುವುದಾಗಿ ಬಹಿರಂಗವಾಗಿ ಸವಾಲು ಹಾಕಿದ್ದರು.

ಯಾವೆಲ್ಲಾ ಸೆಕ್ಷನ್‌ಗಳಡಿ ಮುಖದ್ದಮೆ?

ಪೊಲೀಸ್ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದದ್ದು ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಹಾಳು ಮಾಡಲು ಯತ್ನಿಸಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರತಾಪ್ ಸಿಂಹ ಹಾಗೂ ಇತರರ ವಿರುದ್ಧ ಬಿಎನ್ಎಸ್ (BNS) ಸೆಕ್ಷನ್ 132, 191, 194, 196(1), 299 ಮತ್ತು 353 ರ ಅಡಿಯಲ್ಲಿ ಗಂಭೀರ ಮೊಕದ್ದಮೆ ಹೂಡಿದ್ದಾರೆ.

ಇದನ್ನೂ ಓದಿ:

ಪ್ರತಾಪ್ ಸಿಂಹ ಇಂಥ ಕೇಸ್‌ಗಳಿಗೆ ಹೆದರಲ್ಲ: ಆರ್. ಅಶೋಕ್

 ಈ ಎಫ್‌ಐಆರ್ ವಿಚಾರವಾಗಿ ಆಡಳಿತ ಪಕ್ಷದ ವಿರುದ್ಧ ಗುಡುಗಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಪ್ರತಾಪ್ ಸಿಂಹ ಅವರ ಮೇಲೆ ಈಗಾಗಲೇ 25 ಕೇಸ್‌ಗಳಿವೆ, ಇದೂ ಸಹ ಅಂತಹದ್ದೇ ಮತ್ತೊಂದು ಕೇಸ್ ಅಷ್ಟೇ. ಇಂತಹ ಬೆದರಿಕೆಗಳಿಗೆ ಅವರು ಅಂಜುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧವೇ ಹಲವು ಗಂಭೀರ ಆರೋಪಗಳಿವೆ ಎಂದು ದೂರಿದ ಅಶೋಕ್, ಈ ಸರ್ಕಾರಕ್ಕೆ ಇನ್ನು ಇರುವುದು ಒಂದು ವರ್ಷ ಮಾತ್ರ. ಎಷ್ಟು ಕುಣಿತಿರೋ ಕುಣಿಯಿರಿ, ನಾವು ಯಾವುದಕ್ಕೂ ಬಗ್ಗುವುದಿಲ್ಲ, ಜಗ್ಗುವುದಿಲ್ಲ. ಈ ಗೊತ್ತು ಗುರಿ ಇಲ್ಲದ ಸರ್ಕಾರದ ವಿರುದ್ಧ ನಮ್ಮ ಹೋರಾಟ ನಿಲ್ಲಲ್ಲ” ಎಂದು ಎಚ್ಚರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !