ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಲಾ ಬಸ್ ಮೇಲೆ ಬೃಹತ್ ಗಾತ್ರದ ಮರ ಉರುಳಿ ಬಿದ್ದ ಪರಿಣಾಮ ಐದರ ಹರೆಯದ ಹೆಣ್ಣು ಮಗು ಮೃತಪಟ್ಟು ಇಬ್ಬರು ವಿದ್ಯಾರ್ಥಿನಿಯರ ಸಹಿತ ಚಾಲಕ ಗಾಯಗೊಂಡ ಘಟನೆ ದಕ್ಷಿಣ ಜಿಲ್ಲೆಯ ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಕಲ್ಲೆಟ್ಟಿ ದೈವಸ್ಥಾನದ ಬಳಿ ಬುಧವಾರ ಸಂಜೆ ಸಂಭವಿಸಿದೆ.
ಬಿಳಿಯೂರಿನ ತೋಟ ನಿವಾಸಿ ನಿವಾಸಿ ಚಂದ್ರಹಾಸ್ ಎಂಬವರ ಪುತ್ರಿ, ಎಲ್ ಕೆಜಿ ವಿದ್ಯಾರ್ಥಿನಿ ಚಿರಣ್ವಿ (5) ಮೃತಪಟ್ಟ ದುರ್ದೈವಿ ಬಾಲಕಿಯಾಗಿದ್ದು, ಪೆರಾಜೆ ಸಾದಿಕುಕ್ಕು ನಿವಾಸಿ ಗಣೇಶ್ ಗೌಡ ಎಂಬವರ ಪುತ್ರಿ ಅನ್ವಿ, ಪೆರ್ನೆ ನಿವಾಸಿ ಕ್ಷಿತಿ ರೈ ಹಾಗೂ ಬಸ್ ಚಾಲಕ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಂಭೀರ ಸ್ವರೂಪದ ಗಾಯಗೊಂಡಿರು ಅನ್ವಿಯನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದ್ದರೆ, ಗಾಯಾಳು ಕ್ಷಿತಿ ರೈ ಹಾಗೂ ಬಸ್ ಚಾಲಕ ಕಲ್ಲಡ್ಕದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯಿಂದ ತೀವ್ರ ಗಾಯಗೊಂಡಿದ್ದ ಬಾಲಕಿ ಚಿರಣ್ವಿಯನ್ನು ತಕ್ಷಣವೇ ಪುತ್ತೂರಿನ ಆಸ್ಪತ್ರೆಯೊಂದಕ್ಕೆ ರವಾನಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ.
ಏನಾಯಿತು ಬುಧವಾರ ಸಂಜೆ?
ಸಂಜೆ ಕಲ್ಲಡ್ಕ ಶಾಲೆಯಿಂದ ಶಾಲಾ ಮಕ್ಕಳನ್ನು ಕರೆದುಕೊಂಡು ಮಾಣಿ, ಅಲ್ಲಿಂದ ಬರಣಿಕೆರೆ, ಬರಿಮಾರು, ಕಲ್ಲೆಟ್ಟಿ ಮಾರ್ಗವಾಗಿ ಬುಡೋಳಿ ಮೂಲಕ ಪೆರ್ನೆಗೆ ತೆರಳುತ್ತಿದ್ದ ಶಾಲಾ ಬಸ್ ಮೇಲೆ, ಮಳೆಯೊಂದಿಗೆ ಬೀಸಿದ ಬಿರುಗಾಳಿಯ ತೀವ್ರತೆಗೆ ಕಲ್ಲಟ್ಟಿ ದೈವಸ್ಥಾನದ ರಸ್ತೆ ಬದಿಯಲ್ಲಿದ್ದ ಬೃಹತ್ ಮರ ಏಕಾಏಕಿ ಬುಡ ಸಮೇತ ಉರುಳಿ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಬಸ್‌ನ ಮೇಲ್ಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳೀಯರು ಕೂಡಲೇ ಧಾವಿಸಿ ಬಸ್ಸಿನೊಳಗಿಂದ ವಿದ್ಯಾರ್ಥಿಗಳನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಲು ನೆರವಾದರು.
ಇದೇ ವೇಳೆ ಕಲ್ಲೆಟ್ಟಿ ದೇವಸ್ಥಾನದ ಮೇಲೂ ಮರ ಉರುಳಿ ಬಿದ್ದಿದ್ದು, ದೇವಸ್ಥಾನಕ್ಕೆ ಕೂಡ ಹಾನಿಯಾಗಿದೆ. ಘಟನೆಯಿಂದಾಗಿ ಪರಿಸರದಲ್ಲಿ ವಿದ್ಯುತ್ ಸಂಪರ್ಕ ಹಾಗೂ ಸಂಚಾರಕ್ಕೂ ಅಡಚಣೆ ಉಂಟಾಗಿತ್ತು. ಸುದ್ದಿ ತಿಳಿದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರ ತೆರವುಗೊಳಿಸಿ ಸಂಚಾರ ಸುಗಮಗೊಳಿಸುವ ಕಾರ್ಯ ನಡೆಯುತ್ತಿದ್ದು, ಬಾಲಕಿಯ ದುರಂತ ಸಾವು ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಘಟನೆಯ ಸುತ್ತಮುತ್ತಲಿನ ಪರಿಸರದಲ್ಲಿ ಶೋಕದ ವಾತಾವರಣ ಸೃಷ್ಟಿಸಿದೆ.
ಇದನ್ನೂ ಓದಿ:
ಜಿಲ್ಲಾಧಿಕಾರಿ ಭೇಟಿ:
ಸುದ್ದಿ ತಿಳಿದ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ.ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿಪರಿಶೀಲನೆ ನಡೆಸಿದರು.ಈ ಸಂದರ್ಭ ಬಂಟ್ವಾಳ ತಹಶೀಲ್ದಾರ್ ಮಂಜುನಾಥ್ ,ಸ್ಥಳೀಯ ಕಂದಾಯಾಧಿಕಾರಿಗಳು ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದರು.



