September 21, 2026
Monday, September 21, 2026
spot_img

‘ಅನ್ನಂ ಬ್ರಹ್ಮ’ ಮಾಲಿಕೆ | ದೇಶಿ ಗೋವಿನ ಹಾಲಿನ ತುಪ್ಪಕ್ಕೆ ವಿಶೇಷ ಗುಣ: ದೇಶಿ ಗೋವುಗಳ ಮಹತ್ವ ವಿವರಿಸಿದ ರಾಘವೇಶ್ವರ ಶ್ರೀ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶಿ ಗೋವಿನ ಹಾಲಿನಿಂದ ಸಾಂಪ್ರದಾಯಿಕವಾಗಿ ತಯಾರಿಸಿದ ತುಪ್ಪಕ್ಕೂ ಮಿಶ್ರತಳಿ ಗೋವಿನ ಉತ್ಪನ್ನಗಳಿಂದ ತಯಾರಿಸುವ ತುಪ್ಪಕ್ಕೂ ವ್ಯತ್ಯಾಸವಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಸೋಮವಾರದ ಧರ್ಮಸಭೆಯ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಶ್ರೀಗಳು ಪ್ರವಚನ ಅನುಗ್ರಹಿಸಿದರು.

ಉತ್ತಮ ಮೂಲದ್ರವ್ಯ ಹಾಗೂ ಸಮರ್ಪಕ ಸಂಸ್ಕಾರದಿಂದ ಮಾತ್ರ ಶ್ರೇಷ್ಠ ತುಪ್ಪ ಲಭ್ಯವಾಗುತ್ತದೆ. ಈಚಲ ಮರದಲ್ಲಿ ಮಾವಿನ ಹಣ್ಣು ಬಿಡುವುದಿಲ್ಲ, ಮಾವಿನ ಮರದಲ್ಲಿ ಬಿಟ್ಟ ಹಣ್ಣಿಗಷ್ಟೇ ಮಾವಿನ ಹಣ್ಣು ಎನ್ನುವಂತೆ, ದೇಶಿ ಗೋವಿನ ಹಾಲಿನಿಂದ ತಯಾರಾದ ತುಪ್ಪಕ್ಕೇ ಅದರ ವಿಶಿಷ್ಟ ಗುಣಗಳನ್ನು ಅನ್ವಯಿಸಬಹುದು ಎಂದು ಶ್ರೀಗಳು ಹೇಳಿದರು. ಮೂಲದಲ್ಲಿ ಗೋವು ಇಲ್ಲದ ಹಾಲು, ಮೊಸರು, ಬೆಣ್ಣೆ ಮತ್ತು ತುಪ್ಪಗಳು ನೈಜ ಉತ್ಪನ್ನಗಳಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಹಸು ಮತ್ತು ಎಮ್ಮೆ ಹೇಗೆ ವಿಭಿನ್ನವೋ, ದೇಶಿ ಗೋವು ಮತ್ತು ಮಿಶ್ರತಳಿ ಹಸುಗಳೂ ಅಷ್ಟೇ ವಿಭಿನ್ನವಾಗಿವೆ. ಮಿಶ್ರತಳಿ ಹಸುಗಳು ಮಾನವನ ಹಸ್ತಕ್ಷೇಪದಿಂದ ರೂಪುಗೊಂಡಿರುವುದರಿಂದ ಅವುಗಳ ಹಾಲು ಹಾಗೂ ಅದರಿಂದ ಸಿದ್ಧವಾಗುವ ಉತ್ಪನ್ನಗಳನ್ನು ದೇಶಿ ಗೋವಿನ ಉತ್ಪನ್ನಗಳೊಂದಿಗೆ ಸಮಾನವಾಗಿ ನೋಡಲು ಸಾಧ್ಯವಿಲ್ಲ ಎಂದರು.

ತುಪ್ಪದ ವಿಶೇಷ ಗುಣಗಳನ್ನು ವಿವರಿಸಿದ ಶ್ರೀಗಳು, ಅನ್ನವನ್ನೋ, ಸಾರನ್ನೋ ಎರಡನೇ ಬಾರಿ ಬಿಸಿ ಮಾಡಿದರೆ ಅದು ತನ್ನ ತನವನ್ನು ಕಳೆದುಕೊಳ್ಳುತ್ತದೆ. ಆದರೆ ತುಪ್ಪದ ಸಾಮರ್ಥ್ಯ ಅಪರಿಮಿತವಾಗಿದ್ದು, ತುಪ್ಪವನ್ನು ಸಾವಿರ ಬಾರಿ ಬಿಸಿ ಮಾಡಿದರೂ ಅದು ಕೆಡುವುದಿಲ್ಲ. ಸಾವಿರ ಬಾರಿ ಪಾಕ ಮಾಡಿದಾಗ ತುಪ್ಪ ಅಪರಿಮಿತವಾದ ಶಕ್ತಿಯನ್ನು ಹೊಂದುತ್ತದೆ. ತುಪ್ಪವು ಅಗ್ನಿವರ್ಧಕವಾದರೂ ದೇಹಕ್ಕೆ ತಂಪುಂಟು ಮಾಡುತ್ತದೆ. ಒಂದೇ ಸಮಯದಲ್ಲಿ ಬೇರೆಬೇರೆ ಕಾರ್ಯಗಳನ್ನು ಮಾಡುವ ವಿಶೇಷ ಶಕ್ತಿ ತುಪ್ಪಕ್ಕಿದೆ ಎಂದು ಹೇಳಿದರು.

ನೈಜ ತುಪ್ಪ ಜಠರಾಗ್ನಿಯನ್ನು ಉದ್ದೀಪನಗೊಳಿಸುತ್ತದೆ ಎಂದು ಹೇಳಿದ ಅವರು, ಸಮರ್ಪಕ ಸಂಸ್ಕಾರವಿಲ್ಲದೆ ನೇರವಾಗಿ ಹಾಲಿನ ಕೆನೆಯಿಂದ ತಯಾರಿಸಿದ ತುಪ್ಪದ ಪರಿಣಾಮ ಭಿನ್ನವಾಗಿರಬಹುದು ಎಂದು ತಿಳಿಸಿದರು. ತುಪ್ಪದ ಹೆಸರಿನಲ್ಲಿ ದೊರೆಯುವ ಪ್ರತಿಯೊಂದು ಉತ್ಪನ್ನವನ್ನೂ ಒಂದೇ ರೀತಿಯಲ್ಲಿ ಪರಿಗಣಿಸಬಾರದು ಎಂದು ಸಲಹೆ ನೀಡಿದರು.

ಹಿಂದೆ ಗೋವುಗಳು ಸ್ವತಂತ್ರವಾಗಿ ಸಂಚರಿಸಿ ಹುಲ್ಲು ಮೇಯಲು ಸಾಕಷ್ಟು ಗೋಮಾಳಗಳಿದ್ದವು. ಆದರೆ ಇಂದು ಮನುಷ್ಯನೇ ಗೋಮಾಳಗಳನ್ನು ನುಂಗಿಹಾಕಿರುವುದು ವಿಪರ್ಯಾಸ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು.

ಗುಡಿಗಾರ ಸಮಾಜದಿಂದ ಸ್ವರ್ಣಪಾದುಕಾ ಪೂಜೆ:

ಶ್ರೀಮಠದ ಗುರುಪರಂಪರೆಯನ್ನು ಪಾರಂಪರಿಕವಾಗಿ ಆಶ್ರಯಿಸಿರುವ ಗುಡಿಗಾರ ಸಮಾಜದಿಂದ ಸ್ವರ್ಣಪಾದುಕಾ ಪೂಜೆ ನಡೆಯಿತು. ನಂದಕುಮಾರ್ ಗುಡಿಗಾರ್, ವಿ.ಜಿ. ಶೇಟ್ ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದು, ಶ್ರೀಗಳಿಂದ ಆಶೀರ್ವಾದ ಪಡೆದರು.

ಕಾರ್ಯಕ್ರಮದಲ್ಲಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಶಿಕಾರಿಪುರ, ಸೋನಿ ಕಂಪನಿಯ ಪ್ರಮುಖರಾದ ವಿಶ್ವಾವಸು ಮರಾಠೆ ಉಪಸ್ಥಿತರಿದ್ದು, ಶ್ರೀಗಳಿಂದ ಆಶೀರ್ವಾದ ಪಡೆದರು. ಸುಬ್ರಹ್ಮಣ್ಯ ಹೆಗಡೆ ಹೊಸಪೇಟೆ ಕುಟುಂಬದವರಿಂದ ಗುರುಭಿಕ್ಷಾ ಸೇವೆ ಸಮರ್ಪಿಸಿದರು. ರಮೇಶ್ ಕಟ್ಟ, ಶ್ರೀರಾಮ, ದಿನಪ್ರಧಾನರಾಗಿ ಲಕ್ಷ್ಮೀಶ್ ಎನ್ ಭಟ್ ದಂಪತಿ ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !