ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ಸೂಚಿಸಲು ತೆರಳಿದ್ದ ಬಾಲಿವುಡ್ ನಟಿ ಆಯಿಷಾ ಖಾನ್ರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯಾವುದೇ ಪ್ರಚೋದನೆ ನೀಡದೆ, ಶಾಂತಿಯುತವಾಗಿ ರಸ್ತೆಯಲ್ಲಿ ನಿಂತಿದ್ದ ನಟಿಯನ್ನು ಪೊಲೀಸರು ಬಲವಂತವಾಗಿ ಪೊಲೀಸ್ ವ್ಯಾನ್ಗೆ ಎಳೆದೊಯ್ದ ಘಟನೆ ಭಾರಿ ವಿವಾದಕ್ಕೆ ಕಾರಣವಾಗಿದೆ.
ಆಘಾತ ವ್ಯಕ್ತಪಡಿಸಿದ ನಟಿ ಆಯಿಷಾ ಖಾನ್
ಪೊಲೀಸರು ತಮ್ಮನ್ನು ವಶಕ್ಕೆ ಪಡೆದ ನಂತರ ನಟಿ ಆಯಿಷಾ ಖಾನ್ ತಮ್ಮ ಇನ್ಸ್ಟಾಗ್ರಾಮ್ ಖಾತೆ ಮೂಲಕ ಆಕ್ರೋಶ ಹೊರಹಾಕಿದ್ದಾರೆ. “ನನ್ನ ಕೈಗಳು ಇನ್ನೂ ನಡುಗುತ್ತಿವೆ. ಯಾವುದೇ ಘೋಷಣೆ ಕೂಗದೆ, ಕೇವಲ ರಸ್ತೆಯ ಬದಿಯಲ್ಲಿ ಶಾಂತಿಯುತವಾಗಿ ನಿಂತಿದ್ದಕ್ಕಾಗಿ ನನ್ನನ್ನು ಪೊಲೀಸ್ ವ್ಯಾನ್ಗೆ ಎಸೆಯಲಾಯಿತು. ನನ್ನ ತಮ್ಮ ಮತ್ತು ಸ್ನೇಹಿತರು ವಶದಲ್ಲಿದ್ದ ಕಾರಣ ನಾನು ಹಾಗೂ ಇಬ್ಬರು ಸ್ನೇಹಿತೆಯರು ಅಲ್ಲಿ ನಿಂತಿದ್ದೆವು” ಎಂದು ಅವರು ವಿವರಿಸಿದ್ದಾರೆ.
ಪೊಲೀಸರ ವರ್ತನೆಗೆ ಆಕ್ಷೇಪ
ತಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತಿದ್ದೀರಿ ಎಂದು ಪೊಲೀಸರನ್ನು ಪ್ರಶ್ನಿಸಿದರೂ ಅವರು ಯಾವುದೇ ಉತ್ತರ ನೀಡಲಿಲ್ಲ ಎಂದು ಆಯಿಷಾ ಆರೋಪಿಸಿದ್ದಾರೆ. “ರಸ್ತೆಯಲ್ಲಿ ನಿಲ್ಲುವುದು ಯಾವಾಗ ಅಪರಾಧವಾಯಿತು? ಎಂದು ಅವರು ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:
ಪ್ರಜಾಸಪ್ರಭುತ್ವದ ಹಕ್ಕುಗಳ ಬಗ್ಗೆ ಪ್ರಶ್ನೆ
ಪೊಲೀಸರು ತಮ್ಮನ್ನು ಬಲವಂತವಾಗಿ ಎಳೆಯುತ್ತಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, “ನಾನು ಯಾವ ಕಾನೂನನ್ನು ಮುರಿದೆ? ಪ್ರಜಾಸಪ್ರಭುತ್ವದ ಹಕ್ಕುಗಳನ್ನು ರಕ್ಷಿಸುವ ಬದಲು, ತಮ್ಮದೇ ಪ್ರಜೆಗಳ ಮೇಲೆ ಈ ರೀತಿ ಹಲ್ಲೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪೊಲೀಸರ ಕಣ್ಣಿನಲ್ಲಿಯೂ ನೋವು ಮತ್ತು ಮುಜುಗರವಿತ್ತು, ಆದರೆ ಅವರು ತಮ್ಮ ಕರ್ತವ್ಯದ ಚೌಕಟ್ಟಿಗೆ ಒಳಪಟ್ಟಿದ್ದರು ಎಂದು ಅವರು ನುಡಿದರು. ಕೊನೆಯದಾಗಿ, “ನಾವು ಎಲ್ಲೆಡೆ ಹೊಣೆಗಾರಿಕೆಯ ಕೊರತೆಯನ್ನು ಎದುರಿಸುತ್ತಿದ್ದೇವೆ. ಆದರೂ, ಉತ್ತಮ ಭವಿಷ್ಯದ ಬಗ್ಗೆ ನನಗೆ ಭರವಸೆಯಿದೆ” ಎಂದು #jaihind ಹಾಗೂ #jaimaharashtra ಹ್ಯಾಶ್ಟ್ಯಾಗ್ಗಳೊಂದಿಗೆ ಪೋಸ್ಟ್ ಮುಕ್ತಾಯಗೊಳಿಸಿದ್ದಾರೆ.



