July 23, 2026
Thursday, July 23, 2026
spot_img

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕನ್ನಡದ ಕಂಪು: ಭರತನಾಟ್ಯ ಪ್ರದರ್ಶನ ನೀಡಲಿರುವ ಕಲಬುರಗಿಯ ಕುವರಿ

ಹೊಸದಿಗಂತ ವರದಿ ಕಲಬುರಗಿ:

ಜಿಲ್ಲೆಯ ಕಲಬುರಗಿ ತಾಲ್ಲೂಕಿನ ಹಾಗರಗುಂಡಗಿ ಗ್ರಾಮದ ಭರತನಾಟ್ಯ ಯುವ ಕಲಾವಿದೆ ಪ್ರತೀಕ್ಷಾ ರಾವೂರ್ ಗುರುವಾರ ಸಂಜೆ ನಡೆಯಲಿರುವ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭರತನಾಟ್ಯ ಪ್ರದರ್ಶನ ನೀಡಲಿದ್ದು, ಜಿಲ್ಲೆ ಹಾಗೂ ರಾಜ್ಯಕ್ಕೆ ಹೆಮ್ಮೆ ತರಲಿದ್ದಾರೆ.

ಸ್ಕಾಟ್‌ಲ್ಯಾಂಡ್‌ನ ಗ್ಲಾಸ್ಗೋ ನಗರದಲ್ಲಿರುವ OVO Hydro ವೇದಿಕೆಯಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಪ್ರತೀಕ್ಷಾ ಅವರು ‘ದಿ ಘುಂಗ್ರೂ ರೆವಲ್ಯೂಷನ್’ ನೃತ್ಯ ತಂಡದ ಸದಸ್ಯೆಯಾಗಿ ಭಾಗವಹಿಸಿ ಭಾರತೀಯ ಶಾಸ್ತ್ರೀಯ ನೃತ್ಯದ ವೈಭವವನ್ನು ವಿಶ್ವದ ಮುಂದೆ ಅನಾವರಣಗೊಳಿಸಲಿದ್ದಾರೆ.

ವಿಶ್ವದ ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ಒಂದಾದ ಕಾಮನ್‌ವೆಲ್ತ್ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿವಿಧ ರಾಷ್ಟ್ರಗಳ ಗಣ್ಯರು, ಕ್ರೀಡಾಪಟುಗಳು ಹಾಗೂ ಸಾವಿರಾರು ಪ್ರೇಕ್ಷಕರ ಸಮ್ಮುಖದಲ್ಲಿ ಪ್ರದರ್ಶನ ನೀಡುವ ಅಪರೂಪದ ಅವಕಾಶ ಅವರಿಗೆ ದೊರೆತಿದೆ.

ಭರತನಾಟ್ಯದ ಮೇಲಿನ ಅಪಾರ ಆಸಕ್ತಿ, ಸಮರ್ಪಣೆ ಹಾಗೂ ವರ್ಷಗಳ ಕಠಿಣ ಸಾಧನೆಯ ಫಲವಾಗಿ ಪ್ರತೀಕ್ಷಾ ಅವರು ಈ ಜಾಗತಿಕ ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲಿದ್ದಾರೆ. ಅವರ ಈ ಸಾಧನೆ ಕಲಬುರಗಿ ಜಿಲ್ಲೆ ಹಾಗೂ ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಜಗತ್ತಿನ ಮಟ್ಟದಲ್ಲಿ ಪರಿಚಯಿಸುವಲ್ಲಿ ಮಹತ್ವದ ಹೆಜ್ಜೆಯಾಗಲಿದೆ.

ಪ್ರತೀಕ್ಷಾ ರಾವೂರ್ ಅವರ ಸಾಧನೆ ಯುವ ಕಲಾವಿದರಿಗೆ ಸ್ಫೂರ್ತಿಯಾಗಿದ್ದು, ಜಿಲ್ಲೆಯ ಜನರು ಹಾಗೂ ಕಲಾರಸಿಕರು ಅವರಿಗೆ ಶುಭ ಹಾರೈಸಿದ್ದಾರೆ. ವಿಶ್ವ ವೇದಿಕೆಯಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯದ ಗರಿಮೆಯನ್ನು ಎತ್ತಿಹಿಡಿಯಲಿರುವ ಪ್ರತೀಕ್ಷಾ ಅವರತ್ತ ಜಿಲ್ಲೆಯ ಜನರ ಚಿತ್ತ ನೆಟ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !