ಹೊಸದಿಗಂತ ವರದಿ ದಾವಣಗೆರೆ:
ಬೆಂಗಳೂರು ಕಡೆಯಿಂದ ಬರುತ್ತಿದ್ದ ಸಿ.ಎನ್.ಜಿ ತುಂಬಿದ್ದ ಲಾರಿಗೆ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಓರ್ವ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ ನಗರದ ಹೊರವಲಯದಲ್ಲಿರುವ ಬಾಡಾ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಇಲ್ಲಿನ ಜೆ.ಹೆಚ್.ಪಟೇಲ್ ನಗರದ ನಿವಾಸಿ ಸೃಜನ್ ಹೆಬ್ಬಾಳು(16 ವರ್ಷ) ಸ್ಥಳದಲ್ಲೇ ಸಾವನ್ನಪ್ಪಿದ ಬಾಲಕ. ಶಕ್ತಿನಗರದ ನಿವಾಸಿಗಳಾದ ರಾಮ್ ತೇಜ್ ರೆಡ್ಡಿ(17 ವರ್ಷ) ಹಾಗೂ ಆದಿತ್ಯ(16 ವರ್ಷ) ಗಂಭೀರವಾಗಿ ಗಾಯಗೊಂಡಿದ್ದಾರೆ. ಒಟ್ಟು ಕಾರಿನಲ್ಲಿ ಮೂರು ಜನ ಪ್ರಯಾಣಿಸುತ್ತಿದ್ದರು. ಓರ್ವ ಮೃತಪಟ್ಟಿದ್ದು, ಇನ್ನೊಬ್ಬ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದಾನೆ. ಮತ್ತೊಬ್ಬ ಹುಡುಗನಿಗೆ ಗಂಭೀರ ಗಾಯಗಳಾಗಿದ್ದರೂ, ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಬೃಂದಾವನ ಕನ್ಸಟ್ರಕ್ಷನ್ ಹೆಸರಿನಲ್ಲಿ ನೋಂದಣಿ ಆಗಿರುವ ಕಾರನ್ನು ತೆಗೆದುಕೊಂಡು ಬಾಲಕರು ರೌಂಡ್ಸ್ ಹೋಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಅಜಾಗರೂಕತೆ ಹಾಗೂ ಅತಿವೇಗದ ಕಾರಣದಿಂದ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಲಾರಿಗೆ ಹಿಂಬದಿಯಿಂದ ಅಪ್ಪಳಿಸಿದೆ. ಲಾರಿಯಲ್ಲಿ ಸಿ.ಎನ್.ಜಿ ತುಂಬಿರುವುದರಿಂದ ಅಕಸ್ಮಾತ್ ಸಿಲಿಂಡರ್ ಗಳು ಸ್ಫೋಟಗೊಂಡಿದ್ದರೆ ಭಾರೀ ಅನಾಹುತವೇ ಸಂಭವಿಸುತ್ತಿತ್ತು. ಆದರೆ ಅದೃಷ್ಟವಶಾತ್ ಅಂತಹ ದೊಡ್ಡ ದುರಂತ ತಪ್ಪಿದ್ದು, ಈ ಭಯಾನಕ ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ದಾವಣಗೆರೆ ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



