July 23, 2026
Thursday, July 23, 2026
spot_img

CINE | ತಮನ್ನಾ ಕುರಿತ ಕಮೆಂಟ್‌ಗೆ ಅಣ್ಣು ಕಪೂರ್ ಸಮರ್ಥನೆ: ಟ್ರೋಲರ್‌ಗಳಿಗೆ ಬ್ರಿಟಿಷ್ ಗುಲಾಮರು ಎಂದ ನಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಟಿ ತಮನ್ನಾ ಭಾಟಿಯಾ ಕುರಿತು “ದುಧಿಯಾ ಬದನ್” ಎಂದು ಹೇಳುವ ಮೂಲಕ ತೀವ್ರ ವಿವಾದಕ್ಕೀಡಾಗಿದ್ದ ಬಾಲಿವುಡ್ ಹಿರಿಯ ನಟ ಅನ್ನು ಕಪೂರ್, ತಮ್ಮ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಈ ಕುರಿತು ಸಾರ್ವಜನಿಕರಿಂದ ವ್ಯಕ್ತವಾಗಿರುವ ಆಕ್ರೋಶಕ್ಕೆ ಪ್ರತಿಕ್ರಿಯಿಸಿರುವ ಅವರು, “ಭಾರತೀಯರು ಇಂದಿಗೂ ಮಾನಸಿಕವಾಗಿ ಬ್ರಿಟಿಷರ ಗುಲಾಮರಾಗಿದ್ದಾರೆ” ಎಂದು ವಿಚಿತ್ರ ವಾದ ಮಂಡಿಸಿದ್ದಾರೆ.

ಹಿಂದಿಯಲ್ಲಿ ಹೇಳಿದರೆ ಮಾತ್ರ ವಿವಾದವೇಕೆ?

ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ವಿವಾದಾತ್ಮಕ ಕಾಮೆಂಟ್ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅನ್ನು ಕಪೂರ್, “ಇಂಗ್ಲಿಷ್‌ನಲ್ಲಿ ಅಸಭ್ಯ ಪದಗಳನ್ನು ಬಳಸಿದಾಗ ಜನರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಆದರೆ ಅದೇ ಮಾತನ್ನು ಹಿಂದಿಯಲ್ಲಿ ಹೇಳಿದಾಗ ಮಾತ್ರ ವಿವಾದ ಸೃಷ್ಟಿಯಾಗುತ್ತದೆ. ಜನರಿಗೆ ‘ಮಿಲ್ಕಿ ಬಾಡಿ’ ಎಂದರೆ ಯಾವುದೇ ಆಕ್ಷೇಪವಿಲ್ಲ, ಆದರೆ ‘ದುಧಿಯಾ ಬದನ್’ ಎಂದರೆ ಮಾತ್ರ ಸಮಸ್ಯೆ ಎದುರಾಗುತ್ತದೆ” ಎಂದು ಕಿಡಿಕಾರಿದ್ದಾರೆ.

ಮುಂದುವರಿದು ಮಾತನಾಡಿದ ಅವರು, “ನಾವು 250 ವರ್ಷಗಳ ಕಾಲ ಬ್ರಿಟಿಷರ ಗುಲಾಮರಾಗಿದ್ದೆವು. ಆಗಸ್ಟ್ 15, 1947 ರಂದು ನಮಗೆ ಸಿಕ್ಕಿದ್ದು ಕೇವಲ ರಾಜಕೀಯ ಸ್ವಾತಂತ್ರ್ಯ ಅಷ್ಟೇ. ನಾವಿನ್ನೂ ಮಾನಸಿಕವಾಗಿ ಬ್ರಿಟಿಷರ ಗುಲಾಮರಾಗಿಯೇ ಇದ್ದೇವೆ” ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಮಹಿಳೆಯರಿಗೆ ಗೌರವ ನೀಡುತ್ತೇನೆ ಎಂದ ನಟ

ತಮ್ಮ ಕಾಮೆಂಟ್‌ಗಳಲ್ಲಿ ಮಹಿಳಾ ವಿರೋಧಿ ಧೋರಣೆ ಹಾಗೂ ವಸ್ತುವಿನಂತೆ ಬಿಂಬಿಸುವ ಪ್ರವೃತ್ತಿ ಎದ್ದು ಕಾಣುತ್ತಿದೆ ಎಂಬ ಟೀಕೆಯನ್ನು ಅನ್ನು ಕಪೂರ್ ನಿರಾಕರಿಸಿದ್ದಾರೆ. “ಈ ಭೂಮಿಯ ಮೇಲೆ ಯಾವುದೇ ಪುರುಷ ಅಥವಾ ಮಹಿಳೆಗೆ ಅವಮಾನ ಮಾಡುವ ಕೊನೆಯ ವ್ಯಕ್ತಿ ನಾನಾಗಿರುತ್ತೇನೆ. ನಾನು ಯಾರಿಗೂ ಅಗೌರವ ತೋರುವುದಿಲ್ಲ. ಆದರೆ ನನ್ನ ಈ ಹೇಳಿಕೆಯಿಂದ ತಮನ್ನಾಗೆ ಬೇಸರವಾಗಿದ್ದರೆ, ನಾನು ಅವರಲ್ಲಿ ಕ್ಷಮೆಯಾಚಿಸಲು ಸಿದ್ಧನಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:

ವಿವಾದದ ಹಿನ್ನೆಲೆ ಏನು?

ಕಳೆದ ವರ್ಷ ಯುಟ್ಯೂಬ್ ಸಂದರ್ಶನವೊಂದರಲ್ಲಿ ತಮನ್ನಾ ಭಾಟಿಯಾ ‘ಸ್ತ್ರೀ 2’ ಚಿತ್ರದ ‘ಆಜ್ ಕಿ ರಾತ್’ ಹಾಡಿನ ಕ್ಲಿಪ್ ವೀಕ್ಷಿಸಿದ್ದ ಅನ್ನು ಕಪೂರ್, “ಮಾಶಾ ಅಲ್ಲಾ, ಎಂತಹ ದುಧಿಯಾ ಬದನ್ ಅವಳದ್ದು” ಎಂದು ಉದ್ಗರಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದಾಗ ನಟನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !