Wednesday, September 10, 2025

ವಂಚನೆ ಪ್ರಕರಣ: ಧ್ರುವ ಸರ್ಜಾಗೆ ತಾತ್ಕಾಲಿಕ ರಿಲೀಫ್ ನೀಡಿದ ಕೋರ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡದ ಮಾಸ್ ನಟ ಧ್ರುವ ಸರ್ಜಾ ವಿರುದ್ಧ ಮುಂಬೈನಲ್ಲಿ ದಾಖಲಾಗಿದ್ದ ಬಹುಕೋಟಿ ವಂಚನೆ ಪ್ರಕರಣ ಹೊಸ ತಿರುವು ಪಡೆದಿದೆ. ನಿರ್ಮಾಪಕ ರಾಘವೇಂದ್ರ ಹೆಗಡೆ ಅವರ ದೂರು ಆಧರಿಸಿ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಧ್ರುವ ಸರ್ಜಾ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಆದರೆ ಬಾಂಬೆ ಹೈಕೋರ್ಟ್ ನ್ಯಾಯಾಲಯವು ಈಗ ತಾತ್ಕಾಲಿಕವಾಗಿ ಧ್ರುವ ಸರ್ಜಾಗೆ ರಿಲೀಫ್ ನೀಡಿದೆ.

ರಾಘವೇಂದ್ರ ಹೆಗಡೆ ಅವರು 2018ರಲ್ಲಿ ‘ಸೋಲ್ಜರ್’ ಹೆಸರಿನ ಸಿನಿಮಾವನ್ನು ಮಾಡುವ ಉದ್ದೇಶದಿಂದ ಧ್ರುವ ಸರ್ಜಾಗೆ 3.10 ಕೋಟಿ ರೂಪಾಯಿ ಮುಂಗಡ ನೀಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಸಿನಿಮಾ ಪ್ರಚಾರ ಹಾಗೂ ಚಿತ್ರಕತೆಗಾಗಿ ಹೆಚ್ಚುವರಿಯಾಗಿ 28 ಲಕ್ಷ ರೂಪಾಯಿಯೂ ನೀಡಿದ್ದರಂತೆ. ಆದರೆ ಬಳಿಕ ಧ್ರುವ ಸರ್ಜಾ ಅವರು ಯಾವುದೇ ಡೇಟ್ಸ್ ನೀಡದೇ, ಸಂಪರ್ಕಕ್ಕೂ ಸಿಗದೆ ವಂಚಿಸಿದ್ದಾರೆ ಎಂದು ಅವರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು.

ಆದರೆ ಧ್ರುವ ಸರ್ಜಾ ಪರ ವಕೀಲರು ಹೈಕೋರ್ಟ್ ಮೊರೆ ಹೋಗಿದ್ದು, ಇದು ಕ್ರಿಮಿನಲ್ ಪ್ರಕರಣವಲ್ಲ, ಸಿವಿಲ್ ವಿವಾದ ಎಂದು ವಾದಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯವು ಪ್ರಸ್ತುತ ಹಂತದಲ್ಲಿ ಧ್ರುವ ಸರ್ಜಾ ವಿರುದ್ಧ ಆರೋಪ ಪಟ್ಟಿ ಸಲ್ಲಿಸದಂತೆ ಪೊಲೀಸರಿಗೆ ಸೂಚನೆ ನೀಡಿದೆ. ಹೀಗಾಗಿ ನಟ ಧ್ರುವ ಸರ್ಜಾ ತಾತ್ಕಾಲಿಕವಾಗಿ ವಿಚಾರಣೆಯಿಂದ ತಪ್ಪಿಸಿಕೊಂಡಂತಾಗಿದೆ.

ಇದೇ ವೇಳೆ ಧ್ರುವ ಸರ್ಜಾ ಅವರ ಆಪ್ತರು ಈ ಆರೋಪಗಳನ್ನು ತಳ್ಳಿ ಹಾಕಿದ್ದು, ರಾಘವೇಂದ್ರ ಹೆಗಡೆ ಅವರೇ ಸಂಪರ್ಕದಿಂದ ತಪ್ಪಿಸಿಕೊಂಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ