July 23, 2026
Thursday, July 23, 2026
spot_img

ದೆಹಲಿಯ ವಿದ್ಯಾರ್ಥಿ ಹೋರಾಟ ದಿಕ್ಕು ತಪ್ಪಿದೆ: ಇದು ಅರಾಜಕತೆ ಸೃಷ್ಟಿಸುವ ಪ್ರಯತ್ನ ಎಂದ ಎಂ.ಪಿ.ರೇಣುಕಾಚಾರ್ಯ

ಹೊಸದಿಗಂತ ವರದಿ ದಾವಣಗೆರೆ:

ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಮತ್ತಿತರೆ ವಿಪಕ್ಷಗಳು ದೆಹಲಿ ವಿದ್ಯಾರ್ಥಿ ಹೋರಾಟವನ್ನು ದಿಕ್ಕು ತಪ್ಪಿಸುತ್ತಿವೆ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಎಲ್ಲರಿಗೂ ನೋವಿದೆ. ಪ್ರಕರಣವನ್ನು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಿದೆ. ಈ ಸಂಬಂಧ 12 ಜನರ ಬಂಧನವೂ ಆಗಿದೆ. ಜೆ.ಪಿ.ನಡ್ಡಾ ಹೋರಾಟನಿರತರ ಜೊತೆ ಚರ್ಚೆ ಸಹ ಮಾಡಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಯಾರನ್ನೂ ಕ್ಷಮಿಸುವ ಪ್ರಶ್ನೆಯೇ ಇಲ್ಲವೆಂದು ಮೋದಿಯವರೇ ಹೇಳಿದ್ದಾರೆ. ಆದರೂ ನರೇಂದ್ರ ಮೋದಿಯವರ ಜನಪ್ರಿಯತೆ ಸಹಿಸಲಾಗದ ಕಾಂಗ್ರೆಸ್ ನಾಯಕರು ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಪ್ರಶ್ನೆಪತ್ರಿಕೆ ಸೋರಿಕೆಗೆ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗಾಗಿ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ನೀಡಿದ ಪ್ರಚೋದನೆಯೇ ದೆಹಲಿ ಹೋರಾಟದ ಹಿಂಸಾಚಾರಕ್ಕೆ ಕಾರಣ. ಜನರು ಸರ್ಕಾರದ ವಿರುದ್ಧ ದಂಗೆ ಏಳಬೇಕು, ನರೇಂದ್ರ ಮೋದಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವಂತಾಗಬೇಕು ಎಂಬ ಉದ್ದೇಶದಿಂದ ಜಿರಲೆ ಪಕ್ಷದವರ ನಕಲಿ ಹೋರಾಟಕ್ಕೆ ಕಾಂಗ್ರೆಸ್ ಪ್ರಚೋದನೆ ನೀಡುತ್ತಿದೆ. ಅಲ್ಲಿರುವವರ್‍ಯಾರೂ ವಿದ್ಯಾರ್ಥಿಗಳಲ್ಲ. ಹೋರಾಟಕ್ಕೆ ವಿದೇಶಿ ಫಂಡಿಂಗ್ ಬರುತ್ತಿದ್ದು, ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಭಾರತವನ್ನು ಅಸ್ತಿರಗೊಳಿಸುವ ಹುನ್ನಾರ ಇದರಲ್ಲಿ ಅಡಗಿದೆ ಎಂದು ಅವರು ಆರೋಪಿಸಿದರು.

ಇದನ್ನೂ ಓದಿ:

ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರ ಯಾವುದೇ ಪಾತ್ರವೂ ಇಲ್ಲ. ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಹಾಗೂ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾವಿದ್ದಾಗಲೂ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿದ್ದವು. ಆಗ ಕಾಂಗ್ರೆಸ್ಸಿನ ಯಾವ ಪ್ರಧಾನಿ, ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು? ರಾಹುಲ್ ಗಾಂಧಿ ಎಂದೆಂದಿಗೂ ಪ್ರಬುದ್ಧ ರಾಜಕಾರಣಿ ಆಗಿಲ್ಲ, ಆಗುವುದೂ ಇಲ್ಲ. ಕಾಂಗ್ರೆಸ್ಸಿನ ಕುಮ್ಮಕ್ಕಿನಿಂದಲೇ 150ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಏಟು ಬಿದ್ಧಿವೆ. ರಾಷ್ಟ್ರವಿರೋಧಿ ಹೋರಾಟವನ್ನು ಕಾಂಗ್ರೆಸ್ಸಿಗರು ಮಾಡುತ್ತಿದ್ದಾರೆ. ಬಾಂಗ್ಲಾ, ನೇಪಾಳದ ಮಾದರಿಯಲ್ಲಿ ಇಲ್ಲೂ ಅರಾಜಕತೆ ಸೃಷ್ಟಿಸುವ ಕಾಂಗ್ರೆಸ್ ಪ್ರಯತ್ನ ಫಲಿಸದು ಎಂದು ಅವರು ಸಮರ್ಥಿಸಿಕೊಂಡರು.

ಪಕ್ಷದ ಮುಖಂಡರಾದ ರಾಜು ವೀರಣ್ಣ, ಪ್ರವೀಣ ಜಾಧವ್, ಪಂಜು ಪೈಲ್ವಾನ್, ಕೆ.ಎನ್.ವೆಂಕಟೇಶ, ದಯಾನಂದ, ರವಿಗೌಡ, ಅಜಯಕುಮಾರ, ಚೇತನ್ ಸುದ್ದಿಗೋಷ್ಠಿಯಲ್ಲಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !