ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಸಿಎಂ ಡಿ.ಕೆ ಶಿವಕುಮಾರ್ ಹಾಗೂ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಭೇಟಿಯಾಗುವ ಸಾಧ್ಯತೆ ಇದೆ.
ತಮಿಳುನಾಡು ಸರ್ಕಾರದಿಂದ ಸಭೆಗೆ ಮನವಿ ಬಂದಿದ್ದು, ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಆಗಸ್ಟ್ 3ರಂದು ಬೆಂಗಳೂರಿನಲ್ಲಿ ಮಾತುಕತೆ ನಡೆಸಲು ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ಆದರೆ ಈ ಆಹ್ವಾನವನ್ನು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಒಪ್ಪಿಕೊಂಡಿದ್ದಾರೆಯೇ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ಸಂಭಾವ್ಯ ಸಭೆಯಲ್ಲಿ ಮೇಕೆದಾಟು ಜಲಾಶಯ ಯೋಜನೆ, ಮಳೆ ಕೊರತೆಯ ವರ್ಷಗಳಲ್ಲಿ ಕಾವೇರಿ ನೀರು ಹಂಚಿಕೆ ಕುರಿತ ಪರಸ್ಪರ ಒಪ್ಪಿಗೆಯ ವ್ಯವಸ್ಥೆ ಹಾಗೂ ಬೆಂಗಳೂರು–ಹೊಸೂರು ಮೆಟ್ರೋ ರೈಲು ಸಂಪರ್ಕ ಯೋಜನೆ ಸೇರಿದಂತೆ ಹಲವು ಮಹತ್ವದ ವಿಷಯಗಳು ಚರ್ಚೆಗೆ ಬರಲಿವೆ ಎಂದು ಮೂಲಗಳು ತಿಳಿಸಿವೆ.
ಇದೇ ಮೊದಲ ಬಾರಿಗೆ ಸಿಎಂ ಆಗಿರುವ ವಿಜಯ್ ಜೊತೆ ಸಭೆ ಹೇಗಿರಲಿದೆ ಎನ್ನುವ ಕುತೂಹಲ ಸೃಷ್ಟಿಯಾಗಿದೆ. ಈವರೆಗೂ ತಮಿಳುನಾಡಿನ ಡಿಎಂಕೆ ಮತ್ತು ಎಐಎಡಿಎಂಕೆ ಸರ್ಕಾರಗಳು ಕಾವೇರಿ ನೀರು ಹಂಚಿಕೆ ಕುರಿತು ಕರ್ನಾಟಕದೊಂದಿಗೆ ನೇರ ಮಾತುಕತೆಗೆ ನಿರಾಕರಿಸುತ್ತಲೇ ಬಂದಿವೆ. ಹೀಗಾಗಿ ಮುಖ್ಯಮಂತ್ರಿ ವಿಜಯ್ ಈ ಆಹ್ವಾನವನ್ನು ಸ್ವೀಕರಿಸಿದರೆ, ಅದು ತಮಿಳುನಾಡಿನ ಹಿಂದಿನ ನಿಲುವಿನಿಂದ ಭಿನ್ನವಾದ ಮಹತ್ವದ ಬೆಳವಣಿಗೆಯಾಗುವ ಸಾಧ್ಯತೆ ಇದೆ.



