July 24, 2026
Friday, July 24, 2026
spot_img

ಸ್ವಾತಂತ್ರೋತ್ಸವಕ್ಕೆ ಲಾಲ್‌ಬಾಗ್‌ನಲ್ಲಿ ನಡೆಯುವ ಫ್ಲವರ್‌ ಶೋ ಥೀಮ್‌ ಏನು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರತೀ ವರ್ಷದಂತೆ ಈ ಬಾರಿಯ ಸ್ವಾತಂತ್ರೋತ್ಸವದಂದು ಬೆಂಗಳೂರಿನ ಪುಷ್ಪಕಾಶಿ ಲಾಲ್‌ಬಾಗ್‌ನಲ್ಲಿ ಫ್ಲವರ್‌ ಶೋ ಆಯೋಜಿಸಲಾಗಿದೆ. ಆಗಸ್ಟ್‌ 6 ರಿಂದ 10 ದಿನಗಳ ಕಾಲ ನಡೆಯುವ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಕರ್ನಾಟಕದ ಕರ್ನಾಟಕದ ಮೊದಲ ಸಾಮ್ರಾಜ್ಯವಾದ ಗಂಗ ರಾಜವಂಶದ ವೈಭವದ ಪರಿಕಲ್ಪನೆ ಮೂಡಿಸಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ.

ಕನ್ನಡ ಸಾಹಿತ್ಯ, ಶಿಕ್ಷಣ, ನೀರಾವರಿ ಹಾಗೂ ಶಿಲ್ಪಕಲೆಗೆ ಬುನಾದಿ ಹಾಕಿದ ಗಂಗರ ಚರಿತ್ರೆಯನ್ನು ಜನರಿಗೆ ಪರಿಚಯಿಸಲು ಈ ಬಾರಿಯ ಥೀಮ್‌ನಲ್ಲಿ ನಿರ್ಧರಿಸಲಾಗಿದೆ. ಪ್ರದರ್ಶನಕ್ಕಾಗಿ ಅಲಂಕಾರಿಕ ಗಿಡಗಳು, ಅಪರೂಪದ ಆಕರ್ಷಕ ಹೂವಿನ ಗಿಡಗಳು, ಹುಲ್ಲುಹಾಸು ಸೇರಿದಂತೆ ಉದ್ಯಾನ ಸಿಂಗಾರಗೊಳಿಸಲಾಗುತ್ತಿದೆ. ಆಯ್ದ ಭಾಗಗಳಲ್ಲಿ ಬಣ್ಣ ಬಣ್ಣದ ಹೂವಿನ ಗಿಡಗಳನ್ನು ಬೆಳೆಸಲಾಗುತ್ತಿದೆ. ಪಾಟ್‌ಗಳಲ್ಲಿ ತರಕಾರಿಗಳನ್ನು ಬೆಳೆಸಲಾಗುತ್ತಿದೆ. ಇದರ ಜತೆಗೆ ಗಾಜಿನ ಮನೆಯಲ್ಲಿ ವಿಶೇಷ ಆಕರ್ಷಣೆಯ ಚಿತ್ರಣ ಮೂಡಿಸಲು ಸಿದ್ಧತೆಗಳು ನಡೆಯುತ್ತಿವೆ.

ರಾಜ್ಯದ ದಕ್ಷಿಣ ಭಾಗದಲ್ಲಿ, ಕಾವೇರಿಯ ಪರಿಸರದಲ್ಲಿ ರಾಜ್ಯ ಸ್ಥಾಪನೆ ಮಾಡಿ ದೀರ್ಘ ಕಾಲ ಅಸ್ತಿತ್ವವನ್ನು ಉಳಿಸಿಕೊಂಡು ರಾಜ್ಯಭಾರ ಮಾಡಿದ್ದು ತಲಕಾಡಿನ ಗಂಗರು. ಕರ್ನಾಟಕದ ಅಭಿವೃದ್ಧಿಗೆ, ವಿಶೇಷವಾಗಿ ದಕ್ಷಿಣ ಕರ್ನಾಟಕದಲ್ಲಿ ಭದ್ರ ಬುನಾದಿ ಹಾಕಿದ್ದರು. ಕ್ರಿ.ಶ. 325 ರಿಂದ 999ರವರೆಗೆ ಅಂದರೆ ಸುಮಾರು 675 ವರ್ಷಗಳ ಕಾಲ ಗಂಗರ ಆಡಳಿತವಿತ್ತು. ಗಂಗರು ಅಚ್ಚ ಕನ್ನಡಿಗರಾಗಿದ್ದರು. ಅವರ ಕಾಲದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲಾಗಿತ್ತು. ತಲಕಾಡು, ಕೋಲಾರ, ಶ್ರವಣಬೆಳಗೊಳ ಮೊದಲಾದ ಕಡೆ ವಿದ್ಯಾಕೇಂದ್ರಗಳು ಆರಂಭಿಸಿದ್ದರು ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ಶಿಲ್ಪಕಲೆಗೂ ವಿಶೇಷ ಒತ್ತು ನೀಡಿದ್ದರು. ಗಂಗರ ಕಾಲದಲ್ಲಿ ಕೆತ್ತಲ್ಪಟ್ಟ ಶ್ರವಣಬೆಳಗೊಳದ ವಿಶ್ವವಿಖ್ಯಾತ ಬಾಹುಬಲಿ ಮತ್ತಿತರ ಮೂರ್ತಿಗಳೇ ಇದಕ್ಕೆ ನಿದರ್ಶನ. ನೀರಾವರಿಗೆ ವಿಶೇಷ ಪ್ರಾಧ್ಯಾನ್ಯತೆ ನೀಡಿದ್ದರು. ಕಾವೇರಿ ನದಿಗೆ ಹಲವಾರು ಕಡೆ ಕಟ್ಟೆಗಳನ್ನು ಕಟ್ಟಿಸಿ, ನಾಲೆಗಳ ಮೂಲಕ ನೀರು ಹರಿಸುವ ವ್ಯವಸ್ಥೆ ಮಾಡಿದ್ದರು. ಸಾವಿರಾರು ಕೆರೆ-ಕಟ್ಟೆಗಳು ಗಂಗರ ಆಡಳಿತಾವಧಿಯಲ್ಲಿ ನಿರ್ಮಾಣಗೊಂಡಿವೆ. ಗಂಗರ ಪರಂಪರೆಯ ಐತಿಹ್ಯವನ್ನು ನಾಡಿನ ಜನತೆಗೆ ಪರಿಚಯಿಸುವುದೇ ಈ ಬಾರಿಯ ಪ್ರದರ್ಶನದ ವಿಶೇಷವಾಗಿದೆ.

ಪ್ರದರ್ಶನದಲ್ಲಿ ಗಂಗರ ಕಾಲದ ವಾಸ್ತುಶಿಲ್ಪದ ಕುರಿತಾದ ವಿಶೇಷ ಮಾದರಿಯನ್ನು ಗಾಜಿನ ಮನೆಯಲ್ಲಿ ನಿರ್ಮಿಸಲಾಗುತ್ತಿದೆ. ಗಂಗರ ಕಾಲದ ಪ್ರಮುಖ ದೊರೆಗಳು, ಗಂಗರ ರಾಜಧಾನಿಗಳು, ಅಲ್ಲಿನ ವಿಶೇಷಗಳು, ತಲಕಾಡಿನ ವಿಶೇಷ ದೇವಾಲಯಗಳು, ಚಿತ್ರಕಲೆ ಇತ್ಯಾದಿ ಕುರಿತಾದ ಮಾದರಿಗಳು ಅನಾವರಣಗೊಳ್ಳಲಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !