July 24, 2026
Friday, July 24, 2026
spot_img

ಪದೇ ಪದೆ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡರೆ ಮೂತ್ರಪಿಂಡಕ್ಕೆ ಭಾರೀ ತೊಂದರೆ!

ಮೂತ್ರಪಿಂಡಗಳು ದೇಹದಲ್ಲಿನ ತ್ಯಾಜ್ಯ ವಸ್ತುಗಳನ್ನು ಹೊರಹಾಕುವುದು, ದ್ರವ ಮತ್ತು ಲವಣಗಳ ಸಮತೋಲನವನ್ನು ಕಾಪಾಡುವುದು ಹಾಗೂ ರಕ್ತದೊತ್ತಡವನ್ನು ನಿಯಂತ್ರಿಸುವಂತಹ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತವೆ. ಆದ್ದರಿಂದ ಅವುಗಳ ಆರೋಗ್ಯವನ್ನು ಕಾಪಾಡುವುದು ಅತ್ಯಂತ ಅಗತ್ಯವಾಗಿದೆ.

ನೋವು, ಉರಿಯೂತ ಹಾಗೂ ಜ್ವರವನ್ನು ಕಡಿಮೆ ಮಾಡಲು ಬಳಸುವ ಎನ್ ಎಸ್ ಎ ಐ ಡಿಎಸ್ (NSAIDs) ಔಷಧಗಳು ಉದಾಹರಣೆಗೆ ಡೈಕ್ಲೋಫೆನಾಕ್, ಐಬುಪ್ರೊಫೆನ್, ನ್ಯಾಪ್ರೋಕ್ಸೆನ್, ಆಸಕ್ಲೋಫೆನಾಕ್ ಮತ್ತು ಪ್ಯರಾಸಿಟಮಾಲ್ ವೈದ್ಯರ ಸಲಹೆಯಂತೆ ಬಳಸಿದರೆ ಪರಿಣಾಮಕಾರಿ ಔಷಧಿಗಳಾಗಿವೆ. ಆದರೆ ಇವುಗಳನ್ನು ಅತಿಯಾಗಿ ಅಥವಾ ದೀರ್ಘಕಾಲ ಸೇವಿಸಿದರೆ ಮೂತ್ರಪಿಂಡಗಳ ಕಾರ್ಯಕ್ಷಮತೆಗೆ ಹಾನಿಯಾಗುವ ಸಾಧ್ಯತೆ ಇದೆ.

ಈ ಔಷಧಿಗಳು ಪ್ರೊಸ್ಟಾಗ್ಲಾಂಡಿನ್ ಎಂಬ ರಾಸಾಯನಿಕದ ಉತ್ಪಾದನೆಯನ್ನು ಕಡಿಮೆ ಮಾಡುತ್ತವೆ. ಪ್ರೊಸ್ಟಾಗ್ಲಾಂಡಿನ್ ಮೂತ್ರಪಿಂಡಗಳಿಗೆ ಸಮರ್ಪಕ ರಕ್ತಸಂಚಾರವನ್ನು ಕಾಪಾಡಲು ಸಹಕರಿಸುತ್ತದೆ. ಇದರ ಪ್ರಮಾಣ ಕಡಿಮೆಯಾದಾಗ ಮೂತ್ರಪಿಂಡಗಳಿಗೆ ರಕ್ತದ ಹರಿವು ಇಳಿಯುತ್ತದೆ. ಪರಿಣಾಮವಾಗಿ ಗ್ಲೋಮೆರುಲಾರ್ ಫಿಲ್ಟ್ರೇಶನ್ (GFR) – ಶೋಧನಾ ಸಾಮರ್ಥ್ಯ ಕಡಿಮೆಯಾಗುತ್ತದೆ ಮತ್ತು ಕೆಲವರಲ್ಲಿ ತೀವ್ರ ಮೂತ್ರಪಿಂಡ ಹಾನಿ (ಅಕ್ಯೂಟ್ ಕಿಡ್ನಿ ಇಂಜುರಿ) ಉಂಟಾಗಬಹುದು.

ದೀರ್ಘಕಾಲದ ಬಳಕೆಯಿಂದ ಅನಾಲ್ಜೆಸಿಕ್ ನೆಫ್ರೋಪತಿ ಎಂಬ ದೀರ್ಘಕಾಲದ ಮೂತ್ರಪಿಂಡದ ಕಾಯಿಲೆ ಉಂಟಾಗಬಹುದು. ಜೊತೆಗೆ ದೇಹದಲ್ಲಿ ಉಪ್ಪು ಮತ್ತು ನೀರಿನ ಸಂಗ್ರಹ ಹೆಚ್ಚಾಗಿ ಕಾಲುಗಳಲ್ಲಿ ಊತ, ರಕ್ತದೊತ್ತಡ ಏರಿಕೆ ಹಾಗೂ ರಕ್ತದಲ್ಲಿನ ಪೊಟ್ಯಾಸಿಯಂ ಪ್ರಮಾಣ ಹೆಚ್ಚಾಗುವ ಸಾಧ್ಯತೆಯೂ ಇರುತ್ತದೆ. ಹೃದಯ ಮತ್ತು ರಕ್ತನಾಳಗಳ ಮೇಲೂ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇರುತ್ತದೆ. ಅಪರೂಪವಾಗಿ ಇಂಟರ್‌ಸ್ಟಿಷಿಯಲ್ ನೆಫ್ರೈಟಿಸ್ ಎಂಬ ಮೂತ್ರಪಿಂಡದ ಉರಿಯೂತವೂ ಕಾಣಿಸಬಹುದು.

ವಯೋವೃದ್ಧರು, ಮಧುಮೇಹ, ರಕ್ತದೊತ್ತಡ ಅಥವಾ ಈಗಾಗಲೇ ಮೂತ್ರಪಿಂಡದ ಕಾಯಿಲೆ ಇರುವವರು ಈ ಔಷಧಿಗಳನ್ನು ಬಳಸುವಾಗ ವಿಶೇಷ ಎಚ್ಚರಿಕೆ ವಹಿಸಬೇಕು. ವೈದ್ಯರ ಸಲಹೆಯಂತೆ ಅಗತ್ಯವಿರುವ ಪ್ರಮಾಣದಲ್ಲಿ ಮತ್ತು ನಿಗದಿತ ಅವಧಿಯವರೆಗೆ ಮಾತ್ರ ಔಷಧಿಗಳನ್ನು ಬಳಸುವುದು ಸುರಕ್ಷಿತ. ಸಾಕಷ್ಟು ನೀರು ಸೇವಿಸುವುದು, ಅನಗತ್ಯ ಔಷಧ ಸೇವನೆಯನ್ನು ತಪ್ಪಿಸುವುದು ಹಾಗೂ ಮೂತ್ರಪಿಂಡಗಳ ಕಾರ್ಯಕ್ಷಮತೆಯನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳುವುದು ಉತ್ತಮ ಆರೋಗ್ಯ ಕಾಪಾಡಲು ಸಹಕಾರಿ. ಸ್ವಯಂ ಔಷಧ ಸೇವನೆಯ ಅಭ್ಯಾಸವನ್ನು ತಪ್ಪಿಸುವುದರಿಂದ ಮೂತ್ರಪಿಂಡಗಳನ್ನು ದೀರ್ಘಕಾಲ ಆರೋಗ್ಯವಾಗಿರಿಸಬಹುದು.

ಡಾ. ಶಂಕರ್‌ ಎಸ್‌.
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಶಲ್ಯ ತಂತ್ರ ವಿಭಾಗ
ಎಸ್‌ಡಿಎಂ ಆಯುರ್ವೇದ ಮತ್ತು ಆಸ್ಪತ್ರೆ ಸಂಸ್ಥೆ, ಬೆಂಗಳೂರು

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !