ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ ಆವೃತ್ತಿಯ ಐಪಿಎಲ್ ಮಿನಿ ಹರಾಜಿಗೂ ಮುನ್ನವೇ ಫ್ರಾಂಚೈಸಿಗಳ ನಡುವೆ ಆಟಗಾರರ ವಿನಿಮಯ ಪ್ರಕ್ರಿಯೆ ಜೋರಾಗಿದೆ. ತಮ್ಮ ತಂಡದ ಕೊರತೆಗಳನ್ನು ನೀಗಿಸಲು ಮುಂದಾಗಿರುವ ಲಕ್ನೋ ಸೂಪರ್ ಜೈಂಟ್ಸ್, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸಂಪರ್ಕಿಸಿದೆ. ವರದಿಗಳ ಪ್ರಕಾರ, ಎಲ್‌ಎಸ್‌ಜಿ ತನ್ನ ಬ್ಯಾಟಿಂಗ್ ಕ್ರಮಾಂಕವನ್ನು ಬಲಪಡಿಸಲು ಸಿಎಸ್‌ಕೆಯ ಯುವ ಬ್ಯಾಟರ್ ಉರ್ವಿಲ್ ಪಟೇಲ್ ಅವರನ್ನು ಪಡೆಯಲು ಆಸಕ್ತಿ ತೋರಿಸಿದೆ.
ಸಿಎಸ್‌ಕೆಗೆ ಸಿಗಲಿದ್ದಾರೆ ಸ್ಟಾರ್ ಪೇಸರ್ ಶಮಿ!
ಉರ್ವಿಲ್ ಪಟೇಲ್ ಬದಲಿಗೆ ಭಾರತದ ಅನುಭವಿ ವೇಗಾಸ್ತ್ರ ಮೊಹಮ್ಮದ್ ಶಮಿ ಅವರನ್ನು ಚೆನ್ನೈಗೆ ನೀಡಲು ಲಕ್ನೋ ಮ್ಯಾನೇಜ್‌ಮೆಂಟ್ ಸಿದ್ಧವಿದೆ ಎನ್ನಲಾಗಿದೆ. 2025ರ ಹರಾಜಿನಲ್ಲಿ ಕೇವಲ ₹30 ಲಕ್ಷಕ್ಕೆ ಸಿಎಸ್‌ಕೆ ಪಾಲಾಗಿದ್ದ ಉರ್ವಿಲ್, ಸಿಕ್ಕ ಅವಕಾಶಗಳಲ್ಲಿ 201.5ರ ಆಕರ್ಷಕ ಸ್ಟ್ರೈಕ್ ರೇಟ್‌ನಲ್ಲಿ ರನ್ ಬಾರಿಸಿ ಗಮನ ಸೆಳೆದಿದ್ದರು. ಆದರೆ, ಆಯುಷ್ ಮ್ಹಾತ್ರೆ ತಂಡಕ್ಕೆ ಮರಳುತ್ತಿರುವುದರಿಂದ ಉರ್ವಿಲ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಜಾಗ ಸಿಗುವುದು ಕಷ್ಟವೆನಿಸಿದೆ.
ಹಳದಿ ಪಡೆಗೆ ಶಮಿ ಸೇರ್ಪಡೆಯಿಂದ ಏನು ಲಾಭ?
ಪವರ್‌ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಖಲೀಲ್ ಅಹ್ಮದ್‌ಗೆ ಸಾಥ್ ನೀಡಲು ಸಿಎಸ್‌ಕೆಗೆ ಒಬ್ಬ ಅನುಭವಿ ಭಾರತೀಯ ಬೌಲರ್ ಅಗತ್ಯವಿದೆ. ಈಗಾಗಲೇ ಸ್ಪೆನ್ಸರ್ ಜಾನ್ಸನ್ ಮತ್ತು ಮ್ಯಾಟ್ ಹೆನ್ರಿ ಅವರನ್ನೊಳಗೊಂಡ ಬೌಲಿಂಗ್ ವಿಭಾಗಕ್ಕೆ ಶಮಿ ಸೇರ್ಪಡೆಯಾದರೆ, ಚೆನ್ನೈನ ವೇಗದ ಬೌಲಿಂಗ್ ಪಡೆ ಇನ್ನಷ್ಟು ಮಾರಕವಾಗುವುದರಲ್ಲಿ ಸಂಶಯವಿಲ್ಲ!



