ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಹಾಗೂ ಅದ್ದೂರಿ ಚಿತ್ರ ‘ರಾಮಾಯಣ’ ಬೆಳ್ಳಿತೆರೆ ಮೇಲೆ ಅಕ್ಷರಶಃ ಮೋಡಿ ಮಾಡಿದೆ. ಬಿಡುಗಡೆಯಾಗಿ ಒಂದು ತಿಂಗಳು ಪೂರೈಸುತ್ತಿರುವ ಈ ಸಂದರ್ಭದಲ್ಲಿ ಚಿತ್ರವು ದೇಶ-ವಿದೇಶಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ವಿಶ್ವದಾದ್ಯಂತ ಬರೋಬ್ಬರಿ 1,750 ಕೋಟಿ ರೂಪಾಯಿಗಳಿಗೂ ಅಧಿಕ ಗಳಿಕೆ ಮಾಡಿ ಹೊಸ ದಾಖಲೆ ಬರೆದಿದೆ. ಈ ಅಭೂತಪೂರ್ವ ಯಶಸ್ಸಿನ ಹಿನ್ನೆಲೆಯಲ್ಲಿ ಚಿತ್ರತಂಡವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ವಿಶೇಷ ಗೌರವ ಸಲ್ಲಿಸಿದೆ.
ಚಿತ್ರದ ಐತಿಹಾಸಿಕ ಗೆಲುವಿನ ಸಂಭ್ರಮವನ್ನು ಹಂಚಿಕೊಳ್ಳಲು ‘ರಾಮಾಯಣ’ ತಂಡವು ಗೃಹ ಸಚಿವ ಅಮಿತ್ ಶಾ ಅವರ ಕಚೇರಿಗೆ ಭೇಟಿ ನೀಡಿತು. ಈ ವೇಳೆ ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಸಚಿವರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರೆ, ನಿರ್ದೇಶಕ ನಿತೇಶ್ ತಿವಾರಿ ಅವರು ಸಾಂಪ್ರದಾಯಿಕವಾಗಿ ಶಾಲು ಹೊದಿಸಿ ಗೌರವಿಸಿದರು. ಈ ಸುಂದರ ಕ್ಷಣಗಳ ಫೋಟೋಗಳನ್ನು ‘ವರ್ಲ್ಡ್ ಆಫ್ ರಾಮಾಯಣ’ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ದೇಶ-ವಿದೇಶದ ಪ್ರೇಕ್ಷಕರು ನೀಡುತ್ತಿರುವ ಅಪಾರ ಪ್ರೀತಿ ಮತ್ತು ಬೆಂಬಲಕ್ಕೆ ಚಿತ್ರತಂಡ ಮನತುಂಬಿ ಕೃತಜ್ಞತೆ ಸಲ್ಲಿಸಿದೆ.
https://www.instagram.com/p/DgMXPEWESHi/?utm_source=ig_web_button_share_sheet
ಗೃಹ ಸಚಿವರ ಭೇಟಿಯ ಸಂದರ್ಭದಲ್ಲಿ ಚಿತ್ರದ ಮುಖ್ಯ ತಾರಾಗಣವಾದ ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ವಿಶೇಷ ಆಕರ್ಷಣೆಯಾಗಿದ್ದರು. ತೆರೆಯ ಮೇಲೆ ಶ್ರೀರಾಮನ ಪಾತ್ರಕ್ಕೆ ಜೀವ ತುಂಬಿರುವ ರಣಬೀರ್ ಕಪೂರ್ ಅತ್ಯಂತ ಆಕರ್ಷಕವಾಗಿ ಕಾಣಿಸಿಕೊಂಡರೆ, ನಟಿ ಸಾಯಿ ಪಲ್ಲವಿ ತಮ್ಮ ಎಂದಿನ ಸರಳ ಹಾಗೂ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚುವ ಮೂಲಕ ಎಲ್ಲರ ಗಮನ ಸೆಳೆದರು.
ಸದ್ಯ ‘ರಾಮಾಯಣ’ ತಂಡ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಈ ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ವಿಶ್ವಮಟ್ಟದಲ್ಲಿ ಕೊಂಡೊಯ್ದ ಚಿತ್ರತಂಡದ ಪ್ರಯತ್ನಕ್ಕೆ ಅಭಿಮಾನಿಗಳು ಹಾಗೂ ಸಿನಿಪ್ರಿಯರಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.



