ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ರಾಜಕೀಯದ ಹಿರಿಯ ನಾಯಕ, ಮಾಜಿ ಸಚಿವ ಸಿ. ವೀರಣ್ಣ (86) ನಿನ್ನೆ (ಜುಲೈ 24) ತಡರಾತ್ರಿ ನಿಧನರಾಗಿದ್ದಾರೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನಲ್ಲಿರುವ ತಮ್ಮ ತೋಟದ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ಪ್ರತಿಳಿಸಿವೆ.
ನ್ಯಾಯಾಲಯದಿಂದ ವಿಧಾನಸಭೆಯವರೆಗೆ
ಸಿ. ವೀರಣ್ಣ ಕೇವಲ ರಾಜಕಾರಣಿಯಾಗಿರಲಿಲ್ಲ, ಬದಲಿಗೆ ಕಾನೂನಿನ ಚೌಕಟ್ಟನ್ನು ಸರಿಯಾಗಿ ಅರಿತಿದ್ದ ದಕ್ಷ ವಕೀಲರಾಗಿದ್ದರು. ವಕೀಲ ವೃತ್ತಿಯಲ್ಲಿರುವಾಗಲೇ ಸಮಾಜದ ತಳಮಟ್ಟದ ಜನರ, ಶೋಷಿತರ ಮತ್ತು ಬಡವರ ಪರವಾಗಿ ಧ್ವನಿ ಎತ್ತುತ್ತಿದ್ದ ಇವರು, ನಂತರ ಸಾರ್ವಜನಿಕ ಸೇವೆಗಾಗಿ ರಾಜಕೀಯ ಕ್ಷೇತ್ರಕ್ಕೆ ಧುಮುಕಿದರು. ತಮ್ಮ ವಾಕ್ಚಾತುರ್ಯ ಹಾಗೂ ಜನಪರ ಕಾಳಜಿಯಿಂದಾಗಿ ಅತ್ಯಂತ ವೇಗವಾಗಿ ಪ್ರಭಾವಿ ನಾಯಕನಾಗಿ ಹೊರಹೊಮ್ಮಿದರು.
ಡೆಪ್ಯೂಟಿ ಸ್ಪೀಕರ್ ಸ್ಥಾನಕ್ಕೆ ತಂದ ಗೌರವ:
1983ರಲ್ಲಿ ಕರ್ನಾಟಕ ವಿಧಾನಸಭೆಯ ಉಪಸಭಾಪತಿಯಾಗಿ ಆಯ್ಕೆಯಾಗಿದ್ದ ಸಿ. ವೀರಣ್ಣ, ಸದನದ ಕಲಾಪಗಳನ್ನು ಅತ್ಯಂತ ಯಶಸ್ವಿಯಾಗಿ ಮತ್ತು ನಿಷ್ಪಕ್ಷಪಾತವಾಗಿ ನಡೆಸಿಕೊಟ್ಟಿದ್ದರು. ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಸೌಹಾರ್ದತೆ ಮೂಡಿಸುವಲ್ಲಿ ಅವರು ವಹಿಸಿದ್ದ ಪಾತ್ರ ಇಂದಿಗೂ ಹಿರಿಯ ರಾಜಕಾರಣಿಗಳ ನೆನಪಿನಲ್ಲಿದೆ.
11 ಇಲಾಖೆಗಳನ್ನು ಮುನ್ನಡೆಸಿದ ಆಡಳಿತ ದಕ್ಷತೆ:
1984 ರಿಂದ 1989 ರವರೆಗೆ ರಾಜ್ಯದ ಸಚಿವರಾಗಿ ಕಾರ್ಯನಿರ್ವಹಿಸಿದ ವೀರಣ್ಣ, ಅಂದಿನ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ ಮತ್ತು ಎಸ್.ಆರ್. ಬೊಮ್ಮಾಯಿ ಸಚಿವ ಸಂಪುಟದಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಯಾಗಿದ್ದರು. ಸಾರಿಗೆ, ಕೈಗಾರಿಕೆ, ವಾಣಿಜ್ಯ, ಸಣ್ಣ ಉಳಿತಾಯ, ಬಂಧಿಖಾನೆ ಸೇರಿದಂತೆ ಬರೋಬ್ಬರಿ 11 ಇಲಾಖೆಗಳ ಜವಾಬ್ದಾರಿಯನ್ನು ಹೊತ್ತು, ಪ್ರತಿಯೊಂದು ಇಲಾಖೆಯಲ್ಲೂ ಕ್ರಾಂತಿಕಾರಕ ಸುಧಾರಣೆಗಳನ್ನು ತಂದ ಕೀರ್ತಿ ಇವರಿಗೆ ಸಲ್ಲುತ್ತದೆ.
ಇದನ್ನೂ ಓದಿ:
ವಾಲ್ಮೀಕಿ ಸಮುದಾಯದ ಪಾಲಿನ ‘ಆಶಾಕಿರಣ’:
ಇತಿಹಾಸ ಪುಟಗಳಲ್ಲಿ ಸಿ. ವೀರಣ್ಣ ಹೆಸರು ಸದಾ ಹಸಿರಾಗಿರಲು ಕಾರಣ ಅವರು ವಾಲ್ಮೀಕಿ ಸಮುದಾಯಕ್ಕೆ ಮಾಡಿರುವ ಅಪ್ರತಿಮ ಸೇವೆ. ಹಿಂದುಳಿದಿದ್ದ ವಾಲ್ಮೀಕಿ ಸಮುದಾಯವನ್ನು ಪರಿಶಿಷ್ಟ ಪಂಗಡಗಳ (ST) ಪಟ್ಟಿಗೆ ಸೇರ್ಪಡೆಗೊಳಿಸಲು ಅವರು ದೆಹಲಿ ಮತ್ತು ಬೆಂಗಳೂರಿನ ಮಟ್ಟದಲ್ಲಿ ನಿರಂತರ ಹೋರಾಟ ನಡೆಸಿದ್ದರು. ಇದರ ಫಲವಾಗಿಯೇ ಇಂದು ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಯುವಕರು ಮೀಸಲಾತಿಯ ಸೌಲಭ್ಯ ಪಡೆಯುತ್ತಿದ್ದಾರೆ.



