ಸಾಮಾನ್ಯವಾಗಿ ಸುದೀರ್ಘ ಪ್ರಯಾಣ ಅಥವಾ ಒಂದೇ ಕಡೆ ಹೆಚ್ಚು ಹೊತ್ತು ಕುಳಿತುಕೊಳ್ಳುವುದರಿಂದ ಕಾಲುಗಳಲ್ಲಿ ಊತ ಬರಬಹುದು. ಆದರೆ, ಈ ಸಮಸ್ಯೆ ಪದೇ ಪದೇ ಕಾಡುತ್ತಿದ್ದರೆ, ಅದು ದೇಹದ ಆಂತರಿಕ ಅಂಗಾಂಗಗಳ ವೈಫಲ್ಯದ ಮುನ್ಸೂಚನೆಯಾಗಿರಬಹುದು.
ಹೃದಯದ ತೊಂದರೆ: ಹೃದಯವು ರಕ್ತವನ್ನು ಸರಿಯಾಗಿ ಪಂಪ್ ಮಾಡಲು ಸಾಧ್ಯವಾಗದಿದ್ದಾಗ, ದ್ರವವು ಕಾಲುಗಳು ಹಾಗೂ ಪಾದಗಳಲ್ಲಿ ಶೇಖರಣೆಯಾಗಿ ಊತ ಉಂಟಾಗುತ್ತದೆ (Heart Failure).
ಮೂತ್ರಪಿಂಡದ ಅಸ್ವಸ್ಥತೆ: ಕಿಡ್ನಿಗಳು ದೇಹದಿಂದ ಹೆಚ್ಚುವರಿ ನೀರು ಮತ್ತು ವಿಷಕಾರಿ ಅಂಶಗಳನ್ನು ಹೊರಹಾಕದಿದ್ದಾಗ, ನೀರು ಕಾಲಿನಲ್ಲಿ ಶೇಖರಗೊಂಡು ಊತಕ್ಕೆ ಕಾರಣವಾಗುತ್ತದೆ.
ಲಿವರ್ ಸಮಸ್ಯೆ: ಲಿವರ್ ಹಾನಿಗೊಳಗಾದಾಗ ರಕ್ತದಲ್ಲಿ ‘ಆಲ್ಬುಮಿನ್’ ಪ್ರೋಟೀನ್ ಮಟ್ಟ ಕಡಿಮೆಯಾಗುತ್ತದೆ. ಇದರಿಂದಾಗಿ ರಕ್ತನಾಳಗಳಿಂದ ದ್ರವ ಹೊರಬಂದು ಕಾಲುಗಳು ಮತ್ತು ಹೊಟ್ಟೆಯಲ್ಲಿ ಊತ ಕಾಣಿಸಿಕೊಳ್ಳುತ್ತದೆ.
ರಕ್ತನಾಳಗಳ ಬ್ಲಾಕೇಜ್: ಕಾಲುಗಳ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿದರೆ ರಕ್ತಸಂಚಾರಕ್ಕೆ ಅಡಚಣೆಯಾಗಿ ತೀವ್ರ ಊತ ಮತ್ತು ನೋವು ಉಂಟಾಗುತ್ತದೆ.
ಥೈರಾಯ್ಡ್ ಮತ್ತು ಅಧಿಕ ರಕ್ತದೊತ್ತಡ: ಹೈಪೋಥೈರಾಯ್ಡಿಸಮ್ ಅಥವಾ ಬಿಪಿ ನಿಯಂತ್ರಣ ತಪ್ಪಿದಾಗ ದೇಹದಲ್ಲಿ ದ್ರವದ ಸಮತೋಲನ ಹಾಳಾಗಿ ಊತ ಬರಬಹುದು.



