ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿಯಲ್ಲಿ ರಸ್ತೆ ಬದಿ, ಖಾಲಿ ಸೈಟ್ ಇನ್ನಿತರ ಜಾಗಗಳಲ್ಲಿ ಕಸ ಹಾಕುವವರ ವಿರುದ್ಧ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಮರ ಸಾರಿದ್ದು, ಇಂತವರ ವಿರುದ್ಧ ಕೇಸ್ ಹಾಗೂ ದಂಡ ವಿಧಿಸಲಾಗುತ್ತಿದೆ.
ಜಾಗ ಕ್ಲಿಯರ್ ಆದ ನಂತರ ಮತ್ತೆ ತಂದ ಕಸ ಸುರಿದವರ ವಿರುದ್ಧ ಪ್ರಕರಣ ದಾಖಲಾಗುತ್ತದೆ. ಈಗಾಗಲೇ ನಾಲ್ಕು ಜನರ ಮೇಲೆ ಎಫ್ಐಆರ್ ದಾಖಲಾಗಿದೆ.
ಕಸ ಸ್ವಚ್ಛತಾ ಕಾರ್ಯಾಚರಣೆ ಜಿಬಿಎ ವ್ಯಾಪ್ತಿಯಲ್ಲಿ ನಡೆಯುತ್ತಾ ಇದೆ. ಕಸ ಬ್ಲಾಕ್ ಸ್ಪಾಟ್ ಇರುವ ಕಡೆ ಕಸ ತೆಗೆಯುವಂತಹ ಕೆಲಸ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮ ಮಾಡುತ್ತಿದೆ. ಕಸ ತೆರವು ಮಾಡಿದ ಜಾಗದಲ್ಲಿ ಮತ್ತೆ ಕಸ ಎಸೆದರೆ ಅಂತಹವರ ಮೇಲೆ ಪೊಲೀಸ್ ಕೇಸ್ ಮಾಡಿ ಎಫ್ಐಆರ್ ದಾಖಲು ಮಾಡಲಿದ್ದಾರೆ. ಜೊತೆಗೆ ಬ್ಲಾಕ್ ಸ್ಪಾಟ್ ತೆರವು ಆದ ಜಾಗದಲ್ಲಿ ಮಾರ್ಷಲ್ ಅವರು ಗಸ್ತು ತಿರುಗುತ್ತಾ ಇದ್ದು, ಕಸ ಎಸೆದಿದ್ದು ಪತ್ತೆಯಾದರೆ ಪೊಲೀಸ್ ಕೇಸ್ ಆಗಲಿದೆ.
ಬೆಂಗಳೂರಿನ ಉತ್ತರ ನಗರಪಾಲಿಕೆಯ ಸರ್ವಜ್ಞ ನಗರ ವಾರ್ಡ್ ಸಂಖ್ಯೆ 26 ರ ಬಾಣಸವಾಡಿ ಮುಖ್ಯ ರಸ್ತೆಯಲ್ಲಿ ಕಸವನ್ನ ತೆರವು ಮಾಡಲಾಗಿತ್ತು. ರಸ್ತೆಯನ್ನು ನೋಡಿದರೆ ಕ್ಲೀನ್ ಸಿಟಿಯಂತೆ ಕಾಣಿಸುತ್ತಿತ್ತು. ಹೀಗಿರುವಾಗ ಕೆಲವರು ಮತ್ತೆ ಅದೇ ಜಾಗದಲ್ಲಿ ಕಸ ಹಾಕಿದ್ದಾರೆ. ಅವರ ಮನೆಗೆ ತೆರಳಿ ದಂಡ ಕಟ್ಟಿ ಎಂದು ಹೇಳಲಾಗಿದೆ. ಆದರೆ ಅದಕ್ಕೂ ಅವರು ಕ್ಯಾರೆ ಅಂದಿಲ್ಲ. ಇಂತಹ ನಾಲ್ಕು ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಸಣ್ಣ ನಿರ್ಲಕ್ಷ್ಯ ಅಥವಾ ಒಂದೇ ಒಂದು ದಿನ ಎಂದು ಕಸವನ್ನು ಎಲ್ಲಿ ಬೇಕಲ್ಲಿ ಸುರಿಯಬೇಡಿ. ಕೇಸ್, ದಂಡ ಗ್ಯಾರಂಟಿ.



