ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ನೀಟ್ (NEET) ನಂತಹ ಪ್ರಮುಖ ಪರೀಕ್ಷೆಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಗೆ ಶಾಶ್ವತ ಕಡಿವಾಣ ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಸಾರ್ವಜನಿಕ ಪರೀಕ್ಷೆಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ, ಕೇಂದ್ರ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ‘ಸಾರ್ವಜನಿಕ ಪರೀಕ್ಷಾ ತಿದ್ದುಪಡಿ ಮಸೂದೆ 2026’ ಅನ್ನು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ.
ಶಿಕ್ಷೆ ಮತ್ತು ದಂಡದ ಪ್ರಮಾಣ ಭಾರಿ ಏರಿಕೆ
2024ರ ಮೂಲ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಅಕ್ರಮ ಎಸಗುವ ವ್ಯಕ್ತಿಗಳಿಗೆ ನೀಡುತ್ತಿದ್ದ ಶಿಕ್ಷೆಯನ್ನು 3 ವರ್ಷಗಳಿಂದ 5 ರಿಂದ 10 ವರ್ಷಗಳಿಗೆ ಹೆಚ್ಚಿಸಲಾಗಿದೆ. ಜೊತೆಗೆ, ವಿಧಿಸಲಾಗುವ ದಂಡದ ಮೊತ್ತವನ್ನು ₹10 ಲಕ್ಷದಿಂದ ₹50 ಲಕ್ಷಕ್ಕೆ ಏರಿಸಲಾಗಿದೆ.
ಏಜೆನ್ಸಿಗಳಿಗೆ ಜೈಲು ಹಾಗೂ ಕಪ್ಪುಪಟ್ಟಿ ಭೀತಿ
ಪರೀಕ್ಷೆ ನಡೆಸುವ ಜವಾಬ್ದಾರಿ ಹೊತ್ತು ಕರ್ತವ್ಯಲೋಪ ಎಸಗುವ ಸಂಸ್ಥೆಗಳಿಗೆ ₹5 ಕೋಟಿವರೆಗೆ ದಂಡ ವಿಧಿಸಲಾಗುತ್ತದೆ. ಅಂತಹ ಸಂಸ್ಥೆಗಳನ್ನು 8 ವರ್ಷಗಳ ಕಾಲ ಕಪ್ಪುಪಟ್ಟಿಗೆ (Blacklist) ಸೇರಿಸಲು ಮಸೂದೆಯಲ್ಲಿ ಅವಕಾಶವಿದೆ.
ಸಂಘಟಿತ ಅಪರಾಧಕ್ಕೆ ಬಿಗಿ ತನಿಖೆ
ಪರೀಕ್ಷಾ ಅಕ್ರಮವು ಸಂಘಟಿತ ಅಪರಾಧ ಎಂದು ಸಾಬೀತಾದರೆ ₹10 ಕೋಟಿ ದಂಡ ಮತ್ತು 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುವುದು. ಪ್ರಕರಣದ ತನಿಖೆಯನ್ನು STF ಅಥವಾ ಕೇಂದ್ರೀಯ ಸಂಸ್ಥೆಗಳು ಕೇವಲ 2 ತಿಂಗಳೊಳಗೆ ಪೂರ್ಣಗೊಳಿಸುವುದನ್ನು ಕಡ್ಡಾಯಗೊಳಿಸಲಾಗಿದೆ.



