ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಗಸ್ಟ್ 15 ರಿಂದ ಭಾರತ ಮತ್ತು ಶ್ರೀಲಂಕಾ ನಡುವೆ ಬಹುನಿರೀಕ್ಷಿತ ಟೆಸ್ಟ್ ಸರಣಿ ಆರಂಭವಾಗಲಿದೆ. ಆದರೆ, ಈ ಪ್ರಮುಖ ಸರಣಿಗೆ ಭಾರತ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡುವುದು ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ತಂಡದ ಪ್ರಮುಖ ಆಟಗಾರರ ಫಿಟ್ನೆಸ್ ಸಮಸ್ಯೆ ಹಾಗೂ ಗಾಯಗಳೇ ಈ ವಿಳಂಬಕ್ಕೆ ಪ್ರಮುಖ ಕಾರಣ.
ಮೂವರು ಪ್ರಮುಖ ಆಟಗಾರರು ಲಭ್ಯವಿಲ್ಲ:
ಎರಡು ಪಂದ್ಯಗಳ ಈ ಟೆಸ್ಟ್ ಸರಣಿಯಿಂದ ಮೂರು ಪ್ರಮುಖ ಉದಯೋನ್ಮುಖ ಆಟಗಾರರು ದೂರವುಳಿಯುವುದು ಬಹುತೇಕ ಖಚಿತವಾಗಿದೆ:
- ಹರ್ಷಿತ್ ರಾಣಾ: ಇಂಗ್ಲೆಂಡ್ ಪ್ರವಾಸದ ಸಂದರ್ಭದಲ್ಲಿ ತೀವ್ರ ಸ್ನಾಯು ಸೆಳೆತಕ್ಕೆ ಒಳಗಾಗಿರುವ ವೇಗಿ ಹರ್ಷಿತ್ ರಾಣಾ, ಸಂಪೂರ್ಣ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ.
- ನಿತೀಶ್ ಕುಮಾರ್ ರೆಡ್ಡಿ: ಹ್ಯಾಮ್‌ಸ್ಟ್ರಿಂಗ್ ಗಾಯದಿಂದ ಇನ್ನು ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಯುವ ಆಲ್ರೌಂಡರ್ ನಿತೀಶ್ ಕೂಡ ಆಯ್ಕೆಗೆ ಲಭ್ಯವಿರುವುದಿಲ್ಲ.
- ವಾಷಿಂಗ್ಟನ್ ಸುಂದರ್: ಕಾಲಿನ ಗಾಯದಿಂದ ಬಳಲುತ್ತಿರುವ ಸ್ಪಿನ್ ಆಲ್ ರೌಂಡರ್ ಸುಂದರ್ ಮೊದಲ ಟೆಸ್ಟ್‌ನಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಎರಡನೇ ಪಂದ್ಯಕ್ಕೆ ಅವರ ಲಭ್ಯತೆ ಚೇತರಿಕೆಯ ಮೇಲೆ ಆಧಾರಿತವಾಗಿದೆ.
ಸರಾಂಶ್ ಜೈನ್ಗೆ ಒಲಿಯಲಿದೆಯೇ ಅದೃಷ್ಟ?
ಪ್ರಮುಖ ಆಟಗಾರರ ಗಾಯದ ಸಮಸ್ಯೆಯು ದೇಶಿ ಕ್ರಿಕೆಟ್‌ನಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಸರಾಂಶ್ ಜೈನ್ ಅವರಿಗೆ ವರವಾಗುವ ಸಾಧ್ಯತೆಯಿದೆ. ವಾಷಿಂಗ್ಟನ್ ಸುಂದರ್ ಅವರ ಜಾಗದಲ್ಲಿ ಸರಾಂಶ್ ಜೈನ್ ಭಾರತ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡುವ ಸುವರ್ಣ ಅವಕಾಶ ಹೊಂದಿದ್ದಾರೆ.



