October 6, 2026
Tuesday, October 6, 2026
spot_img

ಕ್ಷಮೆಯೂ ಇಲ್ಲ, ಶೇಕ್ ಹ್ಯಾಂಡ್ ಒತ್ತಡವೂ ಇಲ್ಲ: ಪಾಕ್ ನಿಲುವಿಗೆ WCL ಖಡಕ್ ತಿರುಗೇಟು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾಜಿ ಕ್ರಿಕೆಟ್‌ ದಿಗ್ಗಜರ ಪ್ರಸಿದ್ಧ ‘ವರ್ಲ್ಡ್ ಚಾಂಪಿಯನ್ಸ್ ಆಫ್ ಲೆಜೆಂಡ್ಸ್’ ಟಿ20 ಟೂರ್ನಿಯಿಂದ ಪಾಕಿಸ್ತಾನ್ ಚಾಂಪಿಯನ್ಸ್ ತಂಡವನ್ನು ಅಧಿಕೃತವಾಗಿ ಹೊರಹಾಕಲಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ಆಟಗಾರರಿಗೆ ನಿರಾಕ್ಷೇಪಣಾ ಪತ್ರ ನೀಡಲು ನಿರಾಕರಿಸಿದ್ದೇ ಇದಕ್ಕೆ ಪ್ರಮುಖ ಕಾರಣ. ಇದರಿಂದಾಗಿ ಈ ಬಾರಿಯ ಟೂರ್ನಿಯಲ್ಲಿ ಅಭಿಮಾನಿಗಳು ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ರೋಚಕ ಪಂದ್ಯವನ್ನು ವೀಕ್ಷಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ.

2025ರ WCL ಟೂರ್ನಿಯ ವೇಳೆ ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಿಂದ ರಾಜಕೀಯ ಉದ್ವಿಗ್ನತೆ ಉಂಟಾಗಿತ್ತು. ಈ ಸಂದರ್ಭದಲ್ಲಿ ಯುವರಾಜ್ ಸಿಂಗ್ ನೇತೃತ್ವದ ಭಾರತ ಚಾಂಪಿಯನ್ಸ್ ತಂಡ, ಪಾಕಿಸ್ತಾನ್ ವಿರುದ್ಧದ ಲೀಗ್ ಹಾಗೂ ಸೆಮಿಫೈನಲ್ ಪಂದ್ಯಗಳನ್ನು ಆಡಲು ನಿರಾಕರಿಸಿ ‘ವಾಕ್‌ಓವರ್’ ನೀಡಿತ್ತು. ಭಾರತದ ಈ ನಿರ್ಧಾರ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ತೀವ್ರ ಮುಜುಗರ ಹಾಗೂ ಆಕ್ರೋಶ ತಂದೊಡ್ಡಿತ್ತು.

ಈ ಬಾರಿಯ ಸೀಸನ್‌ನಲ್ಲಿ ಪಾಕ್ ತಂಡವನ್ನು ಸೇರಿಸಿಕೊಳ್ಳಲು WCL ಮಂಡಳಿಯು PCB ಜೊತೆ ಮಾತುಕತೆ ನಡೆಸಿತ್ತು. ಈ ವೇಳೆ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಎರಡು ಪ್ರಮುಖ ಷರತ್ತುಗಳನ್ನು ವಿಧಿಸಿದ್ದರು. ಕಳೆದ ವರ್ಷ ಪಂದ್ಯ ಆಡದಿದ್ದಕ್ಕೆ ಭಾರತೀಯ ಆಟಗಾರರು ಲಿಖಿತವಾಗಿ ಕ್ಷಮೆಯಾಚಿಸಬೇಕು. ಪಂದ್ಯ ಮುಗಿದ ನಂತರ ಭಾರತದ ಆಟಗಾರರು ಪಾಕಿಸ್ತಾನಿ ಆಟಗಾರರೊಂದಿಗೆ ಖಡ್ಡಾಯವಾಗಿ ಶೇಕ್ ಹ್ಯಾಂಡ್ ಮಾಡಬೇಕು.

ಪಾಕಿಸ್ತಾನದ ಬೇಡಿಕೆಗಳಿಗೆ ಒಪ್ಪದ WCL ಮ್ಯಾನೇಜ್‌ಮೆಂಟ್, ಷರತ್ತುಗಳನ್ನು ತಿರಸ್ಕರಿಸಿತು. ರಾಜಕೀಯ ಗೌರವ ಹಾಗೂ ಕ್ರೀಡಾ ಸಮಗ್ರತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಭಾರತೀಯ ಆಟಗಾರರ ಮೇಲೆ ಇಂತಹ ಅನಗತ್ಯ ಒತ್ತಡ ಹೇರಲು ಸಾಧ್ಯವಿಲ್ಲ ಎಂದು ಆಯೋಜಕರು ಸ್ಪಷ್ಟವಾಗಿ ತಿಳಿಸಿದರು. WCL ತನ್ನ ಷರತ್ತುಗಳನ್ನು ಒಪ್ಪದಿದ್ದಾಗ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತನ್ನ ಆಟಗಾರರಿಗೆ ಎನ್‌ಒಸಿ ನೀಡದಿರಲು ಅಂತಿಮ ನಿರ್ಧಾರ ತೆಗೆದುಕೊಂಡಿತು.

ಪಾಕಿಸ್ತಾನದ ಈ ಹಟಮಾರಿ ಧೋರಣೆಯ ಬೆನ್ನಲ್ಲೇ, ಆಯೋಜಕರು ಪಾಕ್ ತಂಡವನ್ನು ಟೂರ್ನಿಯಿಂದ ಸಂಪೂರ್ಣವಾಗಿ ಕೈಬಿಟ್ಟಿದ್ದಾರೆ. ಇದರ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ WCL ಮಂಡಳಿಯು, “ಕೆಲವು ಅನಿವಾರ್ಯ ಕಾರಣಗಳಿಂದಾಗಿ ಪಾಕಿಸ್ತಾನ್ ಚಾಂಪಿಯನ್ಸ್ ಈ ಬಾರಿ ಭಾಗವಹಿಸುತ್ತಿಲ್ಲ. ಆದಾಗ್ಯೂ, ಕ್ರೀಡಾ ಉತ್ಸಾಹ ಮುಂದುವರಿಯಲಿದ್ದು, ಇನ್ನುಳಿದ 6 ಪ್ರಬಲ ತಂಡಗಳೊಂದಿಗೆ ಸೀಸನ್ 3 ಅತ್ಯಂತ ಯಶಸ್ವಿಯಾಗಿ ನಡೆಯಲಿದೆ” ಎಂದು ಸ್ಪಷ್ಟಪಡಿಸಿದೆ.

Must Read