September 19, 2026
Saturday, September 19, 2026
spot_img

ಅನಾರೋಗ್ಯದ ನಡುವೆಯೂ ಸೇವಾ ಕೈಂಕರ್ಯ: ಸಂತೋಷ್ ರೈ ಬೋಳಿಯಾರ್ ಜನ್ಮದಿನ ಪ್ರಯುಕ್ತ ಎಂಟನೇ ನಮೋ ಕುಟೀರ ನಿರ್ಮಾಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅನಾರೋಗ್ಯದ ನಡುವೆಯೂ ಸಮಾಜ ಸೇವಾ ಕೈಂಕರ್ಯ ಮುಂದುವರಿಸಿರುವ ದಿ. ಮೈಸೂರು ಇಲೆಕ್ಟ್ರಿಕಲ್ಸ್ ಲಿಮಿಟೆಡ್‌ನ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಸಂತೋಷ್ ರೈ ಬೋಳಿಯಾರ್ ದಕ್ಷಿಣ ಕನ್ನಡ ಜಿಲ್ಲೆಯ ತಮ್ಮ ಕುವೆತ್ತಬೈಲಿನ ಸ್ವಗೃಹದಲ್ಲಿ ಸೋಮವಾರ 60 ನೇ ವರ್ಷದ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು.

ಈ ಸಂದರ್ಭ ಸಂತೋಷ್ ರೈ ಬೋಳಿಯಾರ್ ಅವರು, ರಾಜೇಶ್ ಮಡಿವಾಳ ಅವರ ಕುಟುಂಬಕ್ಕೆ ನಿರ್ಮಿಸಿ ಕೊಡಲಿರುವ ಎಂಟನೇ ‘ನಮೋ ಕುಟೀರ’ ಮನೆ, ಪಾಣೆಲ ಸರ್ಕಾರಿ ಶಾಲೆಗೆ ನಿರ್ಮಿಸಲಿರುವ ಸಭಾಂಗಣದ ನೀಲ ನಕ್ಷೆ, ಕುರ್ನಾಡು ದತ್ತಾತ್ರೆಯ ಶಾಲೆಗೆ ಮೂಲಸೌಲಭ್ಯಗಳ ವಿಸ್ತರಣೆಗಾಗಿ ನೀಡಲಾದ 50 ಸಾವಿರ ರೂಪಾಯಿ ಸಹಾಯ ಧನದ ಚೆಕ್ಕನ್ನು ಮಾಡೂರು ಮರಿಯಣ್ಣಪಾಲು ಶಿವದುರ್ಗಾಂಭ ಮಠದ ಶ್ರೀ ಶಿವಯೋಗಿ ದುರ್ಗಾನಂದ ಸ್ವಾಮೀಜಿಯವರು ಫಲಾನುಭವಿಗಳಿಗೆ ಹಸ್ತಾಂತರಿಸಿದರು.

ಬಡ ಕ್ಯಾನ್ಸರ್ ರೋಗಿಗಳಿಗಾಗಿ ಟ್ರಸ್ಟ್ ಸ್ಥಾಪನೆ

ಕ್ಯಾನ್ಸರ್ ಚಿಕಿತ್ಸೆಗಾಗಿ ಆಯುಷ್ಮಾನ್ ಭಾರತ ಯೋಜನೆಯಡಿ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಐದು ಲಕ್ಷ ರೂಪಾಯಿ ಲಭಿಸುತ್ತದೆಯಾದರೂ, ಬಡ ರೋಗಿಗಳಿಗೆ ಕ್ಯಾನ್ಸರ್ ರೋಗ ಪತ್ತೆಯ ವಿವಿಧ ಪರೀಕ್ಷೆಗಳಿಗೆ ಲಕ್ಷಾಂತರ ರೂಪಾಯಿ ಹಣ ಹೊಂದಿಸಲು ಕಷ್ಟ ಸಾಧ್ಯವಾಗಿದೆ. ಹೀಗಾಗಿ ಬಡ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗಾಗಿ ಪತ್ನಿಯ ಸಲಹೆಯಂತೆ ಶೀಘ್ರವೇ ಟ್ರಸ್ಟ್ ಒಂದನ್ನ ಸ್ಥಾಪಿಸಲಾಗುವುದೆಂದು ಸಂತೋಷ್ ಬೋಳಿಯಾರ್ ಇದೇ ಸಂದರ್ಭ ಹೇಳಿದರು.

ಬಿಜೆಪಿ ಮಂಗಳೂರು ಮಂಡಲದ ಮಾಜಿ ಅಧ್ಯಕ್ಷರಾದ ಚಂದ್ರಹಾಸ್ ಉಳ್ಳಾಲ್ ಮಾತನಾಡಿ, ಅನೇಕರು ತಮ್ಮ ಹುಟ್ಟು ಹಬ್ಬಗಳನ್ನ ಬಾರ್, ರೆಸ್ಟೋರೆಂಟ್ ಗಳಲ್ಲಿ ಅರ್ಥ ಹೀನವಾಗಿ ಆಚರಿಸುತ್ತಾರೆ. ಆದರೆ ಸಂತೋಷ್ ಬೋಳಿಯಾರ್ ಅವರು ಅಶಕ್ತರಿಗೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರಲ್ಲಿ ಮನೆಗಳನ್ನ ಕಟ್ಟಿ ಕೊಟ್ಟು ಎಲ್ಲರಿಗೂ ಮಾದರಿಯಾಗಿದ್ದಾರೆ.

ಇದನ್ನೂ ಓದಿ:

ಮನಸ್ಸಿನೊಳಗೆ ಎಷ್ಟೇ ನೋವಿದ್ದರು ಸಹ ಅವರ ಮುಖದಲ್ಲಿ ಸಂತೋಷವೇ ಎದ್ದು ಕಾಣುತ್ತಿದೆ. ಅವರ ಮನೆಯವರು ಎಷ್ಟು ಯಾತನೆ ಪಡುತ್ತಿದ್ದಾರೆಂಬುದು ತಲೆದಿಂಬಿಗೇ ತಿಳಿದಿರುತ್ತದೆ. ಸಮಾಜಕ್ಕೆ ನಿರಂತರವಾಗಿ ಸೇವೆ ನೀಡುವ ತುಡಿತ ಇರುವ ಅವರಿಗೆ ದೇವರು ಸದಾ ಆರೋಗ್ಯ ಕರುಣಿಸಲಿಯೆಂದು ಆಶಿಸಿದರು.

ಕಣಂತೂರು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ದೇವಿಪ್ರಸಾದ್ ಪೊಯ್ಯತ್ತಾಯ, ಗಡಿಪ್ರದಾನರಾದ ಪದ್ಮನಾಭ ರೈ ಯಾನೆ ಮಂಜು ಭಂಡಾರಿ, ನಿವೃತ್ತ ಮುಖ್ಯ ಶಿಕ್ಷಕರಾದ ರವೀಂದ್ರ ರೈ ಕಲ್ಲಿಮಾರ್, ಮುಖಂಡರಾದ ರವಿ ರೈ ಪಜೀರು, ಸಂತೋಷ್ ಬೋಳಿಯಾರ್ ಅವರ ಪತ್ನಿ ವೀಣಾ ಎಸ್.ರೈ, ಪುತ್ರ ಸಮ್ಯಕ್ತ್ ರೈ ಬೋಳಿಯಾರ್ ಹಾಗೂ ಪುತ್ರಿ ಸ್ಪರ್ಶ ಎಸ್.ರೈ ಮೊದಲಾದವರು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !