ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದ ಜೆಹಾನಾಬಾದ್ ಜಿಲ್ಲೆಯಲ್ಲಿ ವರದಿಯಾದ ಮನಕಲಕುವ ಘಟನೆಯಲ್ಲಿ, ಆಹಾರ ಬಡಿಸಲು ತಡಮಾಡಿದ ಕಾರಣಕ್ಕಾಗಿ ಮೈದುನನೊಬ್ಬ ತನ್ನ ಅತ್ತಿಗೆಯನ್ನು ಅತ್ಯಂತ ಕ್ರೂರವಾಗಿ ಕಡಿದು ಕೊಂದಿದ್ದಾನೆ. ಇಮಾದ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೊಲೆಯಾದ ಮಹಿಳೆಯನ್ನು ಅಂಶು ದೇವಿ (25) ಎಂದು ಗುರುತಿಸಲಾಗಿದೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ನಡೆದ ಕೃತ್ಯ
ಘಟನೆ ನಡೆದ ಸಮಯದಲ್ಲಿ ಕುಟುಂಬಸ್ಥರೆಲ್ಲರೂ ಭತ್ತದ ಸಸಿ ನೆಡಲು ಜಮೀನಿಗೆ ತೆರಳಿದ್ದರು. ಈ ವೇಳೆ ಕೆಲಸ ಮುಗಿಸಿ ಮನೆಗೆ ಬಂದ ಆರೋಪಿ ಕುನಾಲ್ ಕುಮಾರ್, ಅತ್ತಿಗೆಯ ಬಳಿ ತಕ್ಷಣ ಊಟ ನೀಡುವಂತೆ ಪಟ್ಟು ಹಿಡಿದಿದ್ದಾನೆ. ಆದರೆ ಆಹಾರ ಬಡಿಸುವುದು ಕೊಂಚ ತಡವಾಗಿದ್ದರಿಂದ ಆಕ್ರೋಶಗೊಂಡ ಕುನಾಲ್, ಅತ್ತಿಗೆಯೊಂದಿಗೆ ತೀವ್ರ ವಾಗ್ವಾದಕ್ಕಿಳಿದಿದ್ದಾನೆ.
ಕತ್ತರಿಸಿದ ಶಿರವನ್ನು ಮರಕ್ಕೆ ತೂತುಹಾಕಿದ ಆರೋಪಿ
ಕೋಪದ ಕೈಗೆ ಬುದ್ಧಿಕೊಟ್ಟ ಆರೋಪಿ, ಹರಿತವಾದ ಕೊಡಲಿಯಿಂದ ಅತ್ತಿಗೆಯ ಕತ್ತನ್ನು ಕಡಿದು ಭೀಕರವಾಗಿ ಹತ್ಯೆ ಮಾಡಿದ್ದಾನೆ. ಅಷ್ಟಕ್ಕೇ ನಿಲ್ಲದೆ, ಕತ್ತರಿಸಿದ ತಲೆಯನ್ನು ತಂದು ಊರ ಹೊರಗಿನ ಆಲದ ಮರಕ್ಕೆ ತೂಗುಹಾಕಿದ್ದಾನೆ. ಮರದಲ್ಲಿ ನೇತಾಡುತ್ತಿದ್ದ ತಲೆಯನ್ನು ನೋಡಿ ಬೆಚ್ಚಿಬಿದ್ದ ಗ್ರಾಮಸ್ಥರು ತಕ್ಷಣವೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಆರೋಪಿ ಬಂಧನ, ತನಿಖೆ ಚುರುಕು
ವಿಷಯ ತಿಳಿಯುತ್ತಿದ್ದಂತೆ ಪಾರ್ಸಾ ಬಿಘಾ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಕುನಾಲ್ ಕುಮಾರ್‌ನನ್ನು ಬಂಧಿಸಿದ್ದು, ಕೊಲೆಗೆ ಬಳಸಿದ್ದ ಮಾರಕ ಆಯುಧವನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.



