ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೋಕರ್ಣದ ಅಶೋಕೆಯಲ್ಲಿರುವ ಶ್ರೀ ರಾಮಚಂದ್ರಾಪುರದ ಮೂಲಮಠದಲ್ಲಿ ನಡೆಯುತ್ತಿರುವ ರಾಘವೇಶ್ವರ ಶ್ರೀಗಳ ‘ಅನ್ನಬ್ರಹ್ಮ ಚಾತುರ್ಮಾಸ್ಯ’ ಹಲವು ವಿಶಿಷ್ಟತೆಗಳಿಂದ ಗಮನಸೆಳೆಯುತ್ತಿದೆ.
ಈ ಬಾರಿಯ ಚಾತುರ್ಮಾಸ್ಯದಲ್ಲಿ ಆಹಾರ, ಆಹಾರ ಪದ್ಧತಿಯ ಜಾಗೃತಿ ಪ್ರಮುಖ ಅಂಶವಾಗಿದ್ದು, ಇಲ್ಲಿ 60 ದಿನಗಳಲ್ಲಿ ವೈವಿಧ್ಯಮಯ ಪಾರಂಪರಿಕ ಪಾಕ ಲೋಕದ ಅನಾವರಣವಾಗಲಿದೆ. 300ಕ್ಕೂ ಅಧಿಕ ವಿಶೇಷ ಸಾತ್ವಿಕ ಆಹಾರಗಳನ್ನು ಚಾತುರ್ಮಾಸ್ಯದಲ್ಲಿ ಆಗಮಿಸುವವರಿಗೆ ಉಣಬಡಿಸುವ ವ್ಯವಸ್ಥೆಯನ್ನು ಇಲ್ಲಿ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ:
ಮಲೆನಾಡು ಹಾಗೂ ಕರಾವಳಿಯ ಪಾರಂಪರಿಕ ಭಕ್ಷ್ಯಗಳನ್ನು ಮಠದ ಮಾತೃವಿಭಾದ ನೇತೃತ್ವದಲ್ಲಿ ತಯಾರಿಸುವ ವ್ಯವಸ್ಥೆಯಾಗಿದ್ದು, ವೈವಿಧ್ಯಮಯ ತಂಬುಳಿ, ಕೋಸಂಬರಿ, ಪಾಯಸ ಸೇರಿದಂತೆ ವಿವಿಧ ಭಕ್ಷ್ಯಗಳು ದೇಹಕ್ಕೆ ಹಿತವನ್ನು ನಾಲಿಗೆಗೆ ರುಚಿಯನ್ನೂ ಉಣಬಡಿಸಲಿವೆ. ‘ಭೋಜನ ಕುತೂಹಲಮ್’ ಹಾಗೂ ‘ಕ್ಷೇಮ ಕುತೂಹಲಮ್’ ಎಂಬ ಪ್ರಾಚೀನ ಗ್ರಂಥಗಳನ್ನು ಆಧರಿಸಿಯೂ ಹಲವಾರು ಆರೋಗ್ಯಯುಕ್ತ ಸಾತ್ವಿಕ ಆಹಾರಗಳೂ ಊಟದ ಬಾಳೆಯನ್ನು ಅಲಂಕರಿಸಲಿವೆ.
ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಆಹಾರವೇ ಪ್ರಮುಖ ಆಧಾರವಾಗಿದೆ. ಹಿತವಾದ ಆಹಾರ ಸೇವನೆ, ಮಿತ ಪ್ರಮಾಣದ ಊಟ ಹಾಗೂ ಸರಿಯಾದ ಸಮಯದಲ್ಲಿ ಆಹಾರ ಸೇವಿಸುವುದು ಆರೋಗ್ಯಕರ ಜೀವನದ ಮೂಲ ಸೂತ್ರಗಳಾಗಿವೆ. ಇಷ್ಟವಾದ್ದನ್ನು ತಿನ್ನುವುದಲ್ಲ, ಒಳ್ಳೆಯದನ್ನು ತಿನ್ನಬೇಕು ಎಂದು ಇದೇ ಸಂದರ್ಭ ರಾಘವೇಶ್ವರ ಶ್ರೀಗಳು ಹೇಳಿದ್ದಾರೆ.



