July 30, 2026
Thursday, July 30, 2026
spot_img

CINE | ಹತ್ತು ವರ್ಷದ ಸಿನಿ ಪಯಣ: ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ವಿಜಯ್ ದೇವರಕೊಂಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಚಿತ್ರರಂಗಕ್ಕೆ ಕಾಲಿಟ್ಟು ಯಶಸ್ವಿಯಾಗಿ 10 ವರ್ಷಗಳನ್ನು ಪೂರೈಸಿರುವ ತೆಲುಗು ಚಿತ್ರರಂಗದ ಖ್ಯಾತ ನಟ ವಿಜಯ್ ದೇವರಕೊಂಡ ತಮ್ಮ ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸುದೀರ್ಘವಾದ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. 10 ವರ್ಷಗಳ ಹಿಂದೆ ತಮ್ಮ ಸಿನಿಮಾವನ್ನು ಥಿಯೇಟರ್‌ಗಳಲ್ಲಿ ಒಪ್ಪಿಕೊಂಡ ಪ್ರೇಕ್ಷಕರನ್ನು ನೆನೆದು ಈ ಸಂದೇಶ ಬರೆದಿದ್ದಾರೆ.

“ನಾನು ಕನಸು ಕಂಡಿದ್ದು ತಪ್ಪಲ್ಲ ಎಂದು ಅಂದು ಸಾಬೀತಾಯಿತು”

“10 ವರ್ಷಗಳು ಉರುಳಿವೆ ಎನ್ನುವುದನ್ನು ನಂಬಲು ಒಂಥರಾ ವಿಚಿತ್ರ ಎನಿಸುತ್ತಿದೆ. ಅಂದು ಚಿತ್ರಮಂದಿರಗಳಲ್ಲಿ ನಾವೆಲ್ಲರೂ ಭೇಟಿಯಾದೆವು, ಒಟ್ಟಿಗೆ ನಕ್ಕೆವು, ಪ್ರೀತಿಯಲ್ಲಿ ಬಿದ್ದೆವು. ಅಂದು ಬೆಳೆದ ಆ ನಂಟು ಇಂದು ನಮ್ಮನ್ನು ಇಲ್ಲಿಯವರೆಗೆ ಒಟ್ಟಿಗೆ ಇರಿಸಿದೆ. ಇದನ್ನು ನೆನೆದರೆ ಮನಸ್ಸು ಭಾರವಾಗುತ್ತದೆ. ಅಂದಿನ ಆ ದಿನ ನನ್ನಂತಹ ಒಬ್ಬ ಯುವಕನಿಗೆ ಕಲ್ಪನೆಗೂ ಮೀರಿದ ಶಕ್ತಿಯನ್ನು ನೀಡಿತ್ತು. ಮುಕ್ತವಾಗಿ, ಬಂಡಾಯಗಾರನಂತೆ ಯೋಚಿಸುತ್ತಿದ್ದ ಹುಡುಗನಿಗೆ ಒಂದು ಮಾನ್ಯತೆ ಸಿಕ್ಕಿತ್ತು. ನಾನು ಕನಸು ಕಂಡಿದ್ದು ಅಥವಾ ಯಾವುದನ್ನೋ ನಂಬಿದ್ದು ಮೂರ್ಖತನವಲ್ಲ ಎಂದು ಅಂದು ಸಾಬೀತಾಯಿತು” ಎಂದು ವಿಜಯ್ ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ನಿರ್ದೇಶಕ ತರುಣ್ ಭಾಸ್ಕರ್ ಮತ್ತು ತಂಡಕ್ಕೆ ಧನ್ಯವಾದ:

ತಮ್ಮನ್ನು ಚಿತ್ರರಂಗಕ್ಕೆ ಪರಿಚಯಿಸಿದ ತೆಲುಗು ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿರುವ ವಿಜಯ್, ತಮ್ಮ ಆಪ್ತ ನಿರ್ದೇಶಕ ತರುಣ್ ಭಾಸ್ಕರ್‌ನ್ನು ನೆನೆದು ಭಾವುಕರಾಗಿದ್ದಾರೆ. “ನನ್ನ ಪ್ರೀತಿಯ ತೆಲುಗು ಪ್ರೇಕ್ಷಕರನ್ನು ನಾನು ಹೃದಯಾಳದಿಂದ ಪ್ರೀತಿಸುತ್ತೇನೆ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ತರುಣ್, ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿನ್ನೊಂದಿಗೆ ಈ ಸಿನಿಮಾ ಮಾಡಿದ್ದಕ್ಕೆ ನಾನು ಧನ್ಯ ಧನ್ಯ. ನೀನೊಂದು ಅಮೂಲ್ಯವಾದ ಜೀವ” ಎಂದಿದ್ದಾರೆ. ಇದರೊಂದಿಗೆ ಸಹನಟರಾದ ರಿತು ವರ್ಮಾ, ಪ್ರಿಯದರ್ಶಿ, ಅಭಯ್, ವಿವೇಕ್ ಸಾಗರ್ ಹಾಗೂ ಎಲ್ಲರೂ ತಿರಸ್ಕರಿಸಿದಾಗ ತಮ್ಮನ್ನು ನಂಬಿ ಬಂಡವಾಳ ಹೂಡಿದ ನಿರ್ಮಾಪಕ ರಾಜ್ ಕಂದುಕೂರಿಗೆ ದೊಡ್ಡ ಧನ್ಯವಾದ ಅರ್ಪಿಸಿದ್ದಾರೆ.

ಇದನ್ನೂ ಓದಿ:

“ಇನ್ಮುಂದೆ ನಾನು ಮಾಡುವ ಪ್ರತಿಯೊಂದು ಸಿನಿಮಾವೂ ಹೃದಯದಿಂದ ಮೂಡಿಬರಲಿದೆ”

ಪೋಸ್ಟ್‌ನ ಕೊನೆಯಲ್ಲಿ ತಮ್ಮ ಇಂದಿನ ಜವಾಬ್ದಾರಿಯ ಬಗ್ಗೆ ಮಾತನಾಡಿರುವ ರೌಡಿ ಬಾಯ್, “ಇಂದು ನಾನು ಹಳೆಯ ಮುಕ್ತ ಯುವಕನಾಗಿ ಉಳಿದಿಲ್ಲ. ಜೀವನ ಈಗ ತುಂಬಿ ತುಳುಕುತ್ತಿದೆ. ಆದರೆ ನನ್ನ ಹೆಗಲ ಮೇಲೆ ಈಗ ಜವಾಬ್ದಾರಿಯ ಭಾರವಿದೆ ಎನಿಸುತ್ತಿದೆ. ನನ್ನ ಯೋಚನೆಗಳು ಈಗ ಬದಲಾಗಿವೆ. ಇಲ್ಲಿಂದ ಮುಂದೆ ನಾನು ಮಾಡುವ ಪ್ರತಿಯೊಂದು ಕೆಲಸವೂ ಕೇವಲ ನನ್ನ ಹೃದಯದಿಂದ ಮೂಡಿಬರಲಿದೆ. ಏಕೆಂದರೆ ಬೇರೆ ಯಾವುದೇ ಲೆಕ್ಕಾಚಾರಗಳು ನನಗೆ ಮುಖ್ಯವಲ್ಲ. ನನ್ನ ಹೃದಯದ ಆಳದಿಂದ ಪ್ರತಿಯೊಬ್ಬ ನಿರ್ದೇಶಕರಿಗೆ, ನನ್ನ ‘ರೌಡಿ’ ಅಭಿಮಾನಿ ಬಳಗಕ್ಕೆ, ನನ್ನ ಕುಟುಂಬಕ್ಕೆ ಹಾಗೂ ನನ್ನ ಪ್ರೀತಿಯ ಪ್ರೇಕ್ಷಕರಿಗೆ ಪ್ರೀತಿಯ ನಮನಗಳು” ಎಂದು ಬರೆದುಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !