ಮಾನ್ಸೂನ್ ಆರಂಭವಾಗುತ್ತಿದ್ದಂತೆಯೇ ಹೊರಗಡೆ ತಿನ್ನೋ ಆಸೆ ಆರಂಭವಾಗಿಬಿಡುತ್ತದೆ. ಸಣ್ಣ ಜಡಿ ಮಳೆಯಲ್ಲಿ ರಸ್ತೆ ಬದಿಯ ಗೋಲ್‌ಗಪ್ಪಾ, ಪಾನಿಪುರಿ, ಬೋಂಡ, ಬಜ್ಜಿ, ನೂಡಲ್ಸ್, ಗೋಬಿ ಕೈ ಬೀಸಿ ಕರೆಯುತ್ತವೆ. ಒಂದು ನಿಮಿಷದ ಆಸೆಯನ್ನು ಕಂಟ್ರೋಲ್ ಮಾಡಲಾಗದೇ ತಿನ್ನಬಾರದ್ದನ್ನೆಲ್ಲಾ ತಿಂದು ನಂತರ ಫುಡ್ ಪಾಯಿಸನಿಂಗ್‌ನಿಂದ ಒದ್ದಾಡಬೇಕಾಗುತ್ತದೆ.
ಹೇಗೆ ಬರುತ್ತದೆ ಫುಡ್ ಪಾಯಿಸನಿಂಗ್?
ಕಲುಷಿತ ಆಹಾರ ಅಥವಾ ನೀರಿನ ಮೂಲಕ ಹಾನಿಕಾರಕ ಸೂಕ್ಷ್ಮಜೀವಿಗಳು ದೇಹವನ್ನು ಪ್ರವೇಶಿಸಿದಾಗ ಫುಡ್ ಪಾಯಿಸನ್ ಸಂಭವಿಸುತ್ತದೆ. ಅನೇಕ ಜನರು ವಿಶ್ರಾಂತಿ ಮತ್ತು ಸಾಕಷ್ಟು ನೀರು ಕುಡಿದರೆ ಚೇತರಿಸಿಕೊಳ್ಳುತ್ತಾರೆ. ಈ ಸ್ಥಿತಿಯು ತೀವ್ರತರವಾದ ಪ್ರಕರಣಗಳಲ್ಲಿ ಜೀವಕ್ಕೆ ಅಪಾಯಕಾರಿ ತೊಡಕುಗಳಿಗೆ ಕಾರಣವಾಗಬಹುದು. ಮಳೆಗಾಲದಲ್ಲಿ ಆರ್ದ್ರ ವಾತಾವರಣವು ವಿವಿಧ ರೋಗಕಾರಕ ಸೂಕ್ಷ್ಮಜೀವಿಗಳ ತ್ವರಿತ ಬೆಳವಣಿಗೆಗೆ ಅನುಕೂಲಕರ ಪರಿಸ್ಥಿತಿಗಳನ್ನು ಸೃಷ್ಟಿಸುತ್ತದೆ.
ದೀರ್ಘಕಾಲದವರೆಗೆ ಆಹಾರವನ್ನು ಹೊರಗೆ ಬಿಟ್ಟಾಗ, ಕಲುಷಿತ ನೀರನ್ನು ಸೇವಿಸಿದಾಗ ಇಲ್ಲವೇ ಬೀದಿ ಆಹಾರವನ್ನು ಸೇವಿಸಿದಾಗ ಸೋಂಕಿನ ಅಪಾಯ ಹೆಚ್ಚಾಗುತ್ತದೆ. ಈ ಋತುವಿನಲ್ಲಿ ನೊಣಗಳು ತ್ಯಾಜ್ಯದಿಂದ ಆಹಾರಕ್ಕೆ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ವರ್ಗಾಯಿಸಬಹುದು. ಇದು ಆಹಾರ ವಿಷದ ಸಾಧ್ಯತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.
ಲಕ್ಷಣಗಳೇನು?
ವಾಂತಿ, ಬೇಧಿ, ಜ್ವರ, ವಾಕರಿಕೆ, ಹೊಟ್ಟೆ ನೋವು, ಆಯಾಸ, ನಿರ್ಜಲೀಕರಣ ಹಾಗೂ ತಲೆತಿರುಗುವಿಕೆ ಮೊದಲ ಲಕ್ಷಣಗಳಾಗಿವೆ.
ಕೆಲವರಿಗೆ ಮಲದಲ್ಲಿ ರಕ್ತ, ಕಮ್ಮಿಯಾಗದಂತಹ ಜ್ವರ, ನಿರಂತರ ವಾಂತಿ, ದೇಹದಲ್ಲಿ ನೀರೇ ಇಲ್ಲದಂತೆ ಅನಿಸಿದಾಗ ವೈದ್ಯರನ್ನು ಭೇಟಿ ಮಾಡಿ. ಮಕ್ಕಳು ಹಾಗೂ ವೃದ್ಧರಿಗೆ ಒಂದು ಲಕ್ಷಣ ಕಂಡರೂ ಆಸ್ಪತ್ರೆಗೆ ಕರೆದುಕೊಂಡು ಹೋಗಿ.
ಫುಡ್ ಪಾಯಿಸನ್ ತಪ್ಪಿಸೋದು ಹೇಗೆ?
ಮನೆಯಲ್ಲಿ ಮಾಡಿದ ಅಡುಗೆಯನ್ನು ಪ್ರಿಫರ್ ಮಾಡಿ. ಆದಷ್ಟು ಹೊರಗಿನ ಊಟ ತಿಂಡಿ ಸ್ನಾಕ್ಸ್ ಬಿಟ್ಟುಬಿಡಿ. ನಿತ್ಯವೂ ಊಟಕ್ಕೆ ಮುನ್ನ ಕೈ ತೊಳೆದುಕೊಳ್ಳಿ. ಹಣ್ಣು ತರಕಾರಿಗಳನ್ನು ಉಪ್ಪು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ.



