ಮುಂಗಾರು ಮಳೆ ತರುವ ತಂಪಾದ ವಾತಾವರಣ ಎಲ್ಲರಿಗೂ ಇಷ್ಟ. ಆದರೆ ಫ್ಯಾಷನ್ ಪ್ರಿಯರಿಗೆ ಮಾತ್ರ ಮಳೆಗಾಲ ಎಂದರೆ ಸ್ವಲ್ಪ ತಲೆನೋವು. ರಸ್ತೆಯಲ್ಲಿನ ಕೆಸರು ಮತ್ತು ಹಠಾತ್ ಸುರಿಯುವ ಮಳೆಯಿಂದಾಗಿ ನೆಚ್ಚಿನ ಉಡುಪುಗಳು ಹಾಳಾಗುವ ಭಯ ಕಾಡುತ್ತದೆ. ಹಾಗೆಂದು ಮಳೆಗಾಲದಲ್ಲಿ ಫ್ಯಾಷನ್ ಮಾಡಲು ಸಾಧ್ಯವೇ ಇಲ್ಲ ಎಂದು ಬೇಸರಗೊಳ್ಳಬೇಕಾಗಿಲ್ಲ. ಸರಿಯಾದ ಬಟ್ಟೆ, ಬಣ್ಣ ಮತ್ತು ಪಾದರಕ್ಷೆಗಳನ್ನು ಆಯ್ಕೆ ಮಾಡಿಕೊಂಡರೆ ಜಟಿಲವಾದ ಮಾನ್ಸೂನ್ ದಿನಗಳಲ್ಲೂ ನೀವು ಅತ್ಯಂತ ಆಕರ್ಷಕವಾಗಿ ಹಾಗೂ ಕಂಫರ್ಟಬಲ್ ಆಗಿ ಕಾಣಬಹುದು.
ಫ್ಯಾಬ್ರಿಕ್ ಆಯ್ಕೆ ಪ್ರಮುಖ
ಮಳೆಗಾಲದಲ್ಲಿ ಬಟ್ಟೆಗಳು ಬೇಗನೆ ಒಣಗುವುದಿಲ್ಲ ಮತ್ತು ಒದ್ದೆಯಾದರೆ ಮೈಗೆ ಅಂಟಿಕೊಳ್ಳುತ್ತವೆ. ಆದ್ದರಿಂದ ಈ ದಿನಗಳಲ್ಲಿ ಜಾರ್ಜೆಟ್, ರೇಯಾನ್, ಶೀಫಾನ್, ಲೈಟ್ ಕಾಟನ್ ಅಥವಾ ನೈಲಾನ್ ಮಿಶ್ರಿತ ಬಟ್ಟೆಗಳನ್ನು ಆಯ್ಕೆ ಮಾಡಿ. ಇವು ಹಗುರವಾಗಿದ್ದು, ಒದ್ದೆಯಾದರೂ ಹದಿನೈದು-ಇಪ್ಪತ್ತು ನಿಮಿಷಗಳಲ್ಲೇ ಒಣಗುತ್ತವೆ. ಮಳೆಗಾಲದಲ್ಲಿ ದಪ್ಪನೆಯ ಜೀನ್ಸ್, ಹೆವಿ ಸಿಲ್ಕ್ ಅಥವಾ ವೆಲ್ವೆಟ್ ಬಟ್ಟೆಗಳನ್ನು ಸಂಪೂರ್ಣವಾಗಿ ಅವಾಯ್ಡ್ ಮಾಡಿ.
ಬ್ರೈಟ್ನೆಸ್ ಉಡುಪುಗಳ ಆಯ್ಕೆ
ಮಳೆಗಾಲದ ವಾತಾವರಣ ಹೆಚ್ಚಾಗಿ ಮೋಡ ಕವಿದು ಕತ್ತಲೆಯಿಂದ ಕೂಡಿರುತ್ತದೆ. ಇಂತಹ ಸಮಯದಲ್ಲಿ ಕಪ್ಪು, ಗ್ರೇ ಅಥವಾ ಬ್ರೌನ್ ಬಣ್ಣಗಳ ಉಡುಪುಗಳನ್ನು ಧರಿಸಿದರೆ ಮೂಡ್ ಮತ್ತಷ್ಟು ಡಲ್ ಆಗುತ್ತದೆ. ಅದರ ಬದಲು ಬ್ರೈಟ್ ಹಳದಿ, ಫ್ಲೋರಸೆಂಟ್ ಗ್ರೀನ್, ರಾಣಿ ಪಿಂಕ್, ಸ್ಕೈ ಬ್ಲೂ ಅಥವಾ ಆರೆಂಜ್ ಬಣ್ಣದ ಬಟ್ಟೆಗಳನ್ನು ಧರಿಸಿ. ಇದು ನಿಮ್ಮ ಲುಕ್ ಅನ್ನು ಎದ್ದು ಕಾಣಿಸುವಂತೆ ಮಾಡುತ್ತದೆ.
ಶಾರ್ಟ್, ಆಂಕಲ್ ಲೆಂತ್ ಉಡುಪುಗಳು ಬೆಸ್ಟ್
ರಸ್ತೆಯಲ್ಲಿನ ಕೆಸರು ನೀರು ಬಟ್ಟೆಗೆ ಸಿಡಿಯುವುದನ್ನು ತಡೆಯಲು ಶಾರ್ಟ್ ಅಥವಾ ಆಂಕಲ್ ಲೆಂತ್ ಉಡುಪುಗಳು ಬೆಸ್ಟ್. ಯುವತಿಯರು ಲಾಂಗ್ ಕುರ್ತಿ ಅಥವಾ ಫ್ಲೋರ್ ಲೆಂತ್ ಪಲಾಜೊ ಬದಲಿಗೆ ಶಾರ್ಟ್ ಕುರ್ತಿಗಳು, ಕ್ರಾಪ್ ಟಾಪ್ ಜತೆ ಕ್ಯೂಲೋಟ್ಸ್, ಶಾರ್ಟ್ ಸ್ಕರ್ಟ್ಗಳು ಅಥವಾ ಆಂಕಲ್ ಲೆಂತ್ ಲೆಗ್ಗಿಂಗ್ಸ್ ಧರಿಸಬಹುದು. ಇನ್ನು,ಪುರುಷರು ಫುಲ್ ಲೆಂತ್ ಪ್ಯಾಂಟ್ಗಳನ್ನು ಕೆಳಗೆ ಮಡಚುವ ಬದಲು ಆಂಕಲ್ ಲೆಂತ್ ಚಿನೋಸ್ ಅಥವಾ ಶಾರ್ಟ್ಸ್ ಬಳಸಬಹುದು.
ಪಾದರಕ್ಷೆಗಳ ಆಯ್ಕೆಯಲ್ಲಿ ಜಾಣ್ಮೆ ಇರಲಿ
ಮಳೆಗಾಲದಲ್ಲಿ ಚರ್ಮದ ಶೂಗಳು ಮತ್ತು ಕ್ಯಾನ್ವಾಸ್ ಸ್ನೀಕರ್ಸ್ಗಳನ್ನು ಧರಿಸಲೇಬೇಡಿ. ಇವು ನೀರು ಬಿದ್ದರೆ ಹಾಳಾಗುತ್ತವೆ ಮತ್ತು ದುರ್ವಾಸನೆ ಬೀರುತ್ತವೆ. ಹೈ ಹೀಲ್ಸ್ ಧರಿಸುವುದು ಕೂಡ ಮಳೆಗಾಲದಲ್ಲಿ ಅಪಾಯಕಾರಿ. ಇದರ ಬದಲು ವಾಟರ್ ಪ್ರೂಫ್ ಆಗಿರುವ ರಬ್ಬರ್ ಅಥವಾ ಪ್ಲಾಸ್ಟಿಕ್ ಮೆಟೀರಿಯಲ್ನ ಸ್ಯಾಂಡಲ್ಸ್, ಫ್ಲಿಪ್-ಫ್ಲಾಪ್ಸ್ ಅಥವಾ ಕಲರ್ಫುಲ್ ಗಮ್ ಬೂಟ್ಸ್. ಇವು ಈಗ ಮಾರುಕಟ್ಟೆಯಲ್ಲಿ ಅತ್ಯಂತ ಸ್ಟೈಲಿಶ್ ವಿನ್ಯಾಸಗಳಲ್ಲಿ ಲಭ್ಯವಿವೆ.
ಆಕ್ಸೆಸರೀಸ್ ಮತ್ತು ಮೇಕಪ್
ಈಗ ಛತ್ರಿ ಮತ್ತು ರೈನ್ಕೋಟ್ಗಳು ಕೇವಲ ರಕ್ಷಣಾ ಕವಚಗಳಾಗಿ ಉಳಿದಿಲ್ಲ, ಅವು ಫ್ಯಾಷನ್ ಸ್ಟೇಟ್ಮೆಂಟ್ ಆಗಿವೆ. ಪಾರದರ್ಶಕ ರೈನ್ಕೋಟ್ಗಳು ಮತ್ತು ಫ್ಲೋರಲ್ ಪ್ರಿಂಟ್ ಇರುವ ಬಣ್ಣ ಬಣ್ಣದ ಕೊಡೆಗಳನ್ನು ನಿಮ್ಮ ಔಟ್ಫಿಟ್ಗೆ ಮ್ಯಾಚ್ ಮಾಡಿ ಬಳಸಬಹುದು. ಬಟ್ಟೆಯ ಬ್ಯಾಗ್ ಅಥವಾ ಲೆದರ್ ಬ್ಯಾಗ್ಗಳ ಬದಲಿಗೆ ವಾಟರ್ ಪ್ರೂಫ್ ಟ್ರಾನ್ಸ್ಪರೆಂಟ್ ಪ್ಲಾಸ್ಟಿಕ್ ಅಥವಾ ಸಿಲಿಕಾನ್ ಬ್ಯಾಗ್ಗಳನ್ನು ಬಳಸಿ.
ಮಳೆಗಾಲದಲ್ಲಿ ಮೇಕಪ್ನಲ್ಲಿ ಕಡ್ಡಾಯವಾಗಿ ವಾಟರ್ ಪ್ರೂಫ್ ಕಾಜಲ್, ಐಲೈನರ್ ಮತ್ತು ಮ್ಯಾಟ್ ಲಿಪ್ಸ್ಟಿಕ್ ಬಳಸಿ. ಫೌಂಡೇಶನ್ ಬದಲು ಹಗುರವಾದ ಬಿಬಿ ಕ್ರೀಮ್ ಬಳಸುವುದು ಸೂಕ್ತ.



