November 24, 2026
Tuesday, November 24, 2026
spot_img

ಮಗುವನ್ನು ಎದೆಗೆ ಅಪ್ಪಿಕೊಂಡರೆ ಸಿಗುತ್ತೆ ಅದ್ಭುತ ಆರೋಗ್ಯ ಲಾಭ: ಏನಿದು ಕಾಂಗರೂ ಮದರ್ ಕೇರ್?

ಮಗು ಹುಟ್ಟಿದ ತಕ್ಷಣ ತಾಯಿಯ ಎದೆಗೆ ಅಪ್ಪಿಕೊಂಡಾಗ ಸಿಗುವ ಆ ಸ್ಪರ್ಶ, ಬೆಚ್ಚಗಿನ ಅಪ್ಪುಗೆ ಕೇವಲ ಪ್ರೀತಿಯ ಸಂಕೇತವಲ್ಲ, ಅದು ಮಗುವಿನ ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿ. ವಿಶೇಷವಾಗಿ ಅವಧಿಗೂ ಮುನ್ನ ಜನಿಸಿದ ಮತ್ತು ಕಡಿಮೆ ತೂಕ ಹೊಂದಿರುವ ನವಜಾತ ಶಿಶುಗಳ ಆರೈಕೆಯಲ್ಲಿ ಈ ವಿಧಾನಕ್ಕೆ ಹೆಚ್ಚಿನ ಮಹತ್ವವಿದೆ. ಇದನ್ನೇ ವೈದ್ಯಕೀಯ ಭಾಷೆಯಲ್ಲಿ ಕಾಂಗರೂ ಮದರ್ ಕೇರ್ (Kangaroo Mother Care – KMC) ಎಂದು ಕರೆಯಲಾಗುತ್ತದೆ.

ಏನಿದು ಕಾಂಗರೂ ಮದರ್ ಕೇರ್?

ಕಾಂಗರೂ ಮದರ್ ಕೇರ್ ಎಂದರೆ ನವಜಾತ ಶಿಶುವನ್ನು ತಾಯಿಯ ಅಥವಾ ತಂದೆಯ ಎದೆಗೆ ನೇರವಾಗಿ ಚರ್ಮದಿಂದ ಚರ್ಮಕ್ಕೆ ಸಂಪರ್ಕವಾಗುವಂತೆ ಹಿಡಿದುಕೊಳ್ಳುವ ಆರೈಕೆ ವಿಧಾನ. ಇದನ್ನು ‘ಸ್ಕಿನ್ ಟು ಸ್ಕಿನ್ ಕಾಂಟ್ಯಾಕ್ಟ್’ ಎಂದೂ ಕರೆಯುತ್ತಾರೆ.

ಈ ವಿಧಾನದಲ್ಲಿ ಮಗುವಿಗೆ ಡೈಪರ್ ಮತ್ತು ಟೋಪಿ ಹೊರತುಪಡಿಸಿ ಹೆಚ್ಚಿನ ಬಟ್ಟೆಗಳನ್ನು ಹಾಕದೆ, ಪೋಷಕರ ಎದೆಯ ಮೇಲೆ ಹೊಟ್ಟೆ ಮತ್ತು ಎದೆಯ ಭಾಗ ತಾಗುವಂತೆ ಮಲಗಿಸಲಾಗುತ್ತದೆ. ಮಗುವಿನ ತಲೆಯನ್ನು ಒಂದು ಬದಿಗೆ ತಿರುಗಿಸಿ, ಉಸಿರಾಟಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು.

ಮಗುವಿನ ದೇಹದ ಉಷ್ಣತೆ ಕಾಪಾಡುತ್ತದೆ

ನವಜಾತ ಶಿಶುಗಳಿಗೆ ದೇಹದ ಉಷ್ಣತೆಯನ್ನು ಸ್ವತಃ ನಿಯಂತ್ರಿಸಿಕೊಳ್ಳುವುದು ಕಷ್ಟವಾಗಬಹುದು. ತಾಯಿಯ ದೇಹದ ಉಷ್ಣತೆಯು ಮಗುವಿಗೆ ನೈಸರ್ಗಿಕ ಬೆಚ್ಚನೆಯ ವಾತಾವರಣ ಒದಗಿಸುತ್ತದೆ. ಇದರಿಂದ ಮಗುವಿನ ದೇಹದ ತಾಪಮಾನ ಸ್ಥಿರವಾಗಿರಲು ಸಹಾಯವಾಗುತ್ತದೆ. ವಿಶೇಷವಾಗಿ ಕಡಿಮೆ ತೂಕದ ಶಿಶುಗಳಿಗೆ ಇದು ಹೆಚ್ಚು ಪ್ರಯೋಜನಕಾರಿ.

ಮಗುವಿನ ತೂಕ ಹೆಚ್ಚಳಕ್ಕೆ ಸಹಕಾರಿ

ಕಾಂಗರೂ ಮದರ್ ಕೇರ್ ವಿಧಾನವು ಮಗುವಿನ ಬೆಳವಣಿಗೆಗೆ ಪೂರಕವಾಗಿದೆ. ಈ ವಿಧಾನದಿಂದ ಮಗುವಿಗೆ ನಿಯಮಿತವಾಗಿ ಎದೆಹಾಲು ನೀಡಲು ಅನುಕೂಲವಾಗುತ್ತದೆ. ಅಗತ್ಯ ಪೋಷಕಾಂಶಗಳು ದೊರೆಯುವುದರಿಂದ ಮಗುವಿನ ಆರೋಗ್ಯಕರ ತೂಕ ಹೆಚ್ಚಳಕ್ಕೆ ಸಹಾಯವಾಗುತ್ತದೆ.

ಇದನ್ನೂ ಓದಿ:

ಉಸಿರಾಟ ಮತ್ತು ಹೃದಯ ಬಡಿತ ನಿಯಂತ್ರಣ

ತಾಯಿಯ ಎದೆಯ ಮೇಲೆ ಮಗುವನ್ನು ಇರಿಸುವುದರಿಂದ ಮಗುವಿಗೆ ನೆಮ್ಮದಿ ದೊರೆಯುತ್ತದೆ. ಈ ವಿಧಾನವು ಮಗುವಿನ ಉಸಿರಾಟ ಮತ್ತು ಹೃದಯ ಬಡಿತ ಸ್ಥಿರವಾಗಿರಲು ನೆರವಾಗಬಹುದು. ಅಲ್ಲದೆ, ರಕ್ತದಲ್ಲಿನ ಆಮ್ಲಜನಕದ ಮಟ್ಟ ಸುಧಾರಿಸಲು ಸಹಕಾರಿಯಾಗುತ್ತದೆ.

ತಾಯಿ ಮತ್ತು ಮಗುವಿನ ಭಾವನಾತ್ಮಕ ಬಾಂಧವ್ಯ ಹೆಚ್ಚಿಸುತ್ತದೆ

ಮಗುವಿಗೆ ತಾಯಿಯ ಹೃದಯ ಬಡಿತ, ದೇಹದ ಉಷ್ಣತೆ ಮತ್ತು ಪರಿಚಿತ ಸ್ಪರ್ಶದ ಅನುಭವ ಸಿಗುತ್ತದೆ. ಇದರಿಂದ ಮಗು ಹೆಚ್ಚು ನೆಮ್ಮದಿಯಿಂದ ಇರಲು ಸಹಾಯವಾಗುತ್ತದೆ. ತಾಯಿಗೂ ಮಗುವಿನೊಂದಿಗೆ ಭಾವನಾತ್ಮಕ ಸಂಪರ್ಕ ಬೆಳೆಸಿಕೊಳ್ಳಲು ಅನುಕೂಲವಾಗುತ್ತದೆ. ತಂದೆಯೂ ಈ ವಿಧಾನದಲ್ಲಿ ಭಾಗವಹಿಸಬಹುದು.

ಕಾಂಗರೂ ಮದರ್ ಕೇರ್ ಮಾಡುವಾಗ ಏನು ಗಮನಿಸಬೇಕು?

  • ಮಗುವಿನ ಮುಖ ಸ್ಪಷ್ಟವಾಗಿ ಕಾಣುವಂತೆ ನೋಡಿಕೊಳ್ಳಿ.
  • ಮೂಗು ಮತ್ತು ಬಾಯಿ ಮುಚ್ಚಿಕೊಳ್ಳದಂತೆ ಎಚ್ಚರಿಕೆ ವಹಿಸಿ.
  • ಮಗುವಿನ ತಲೆ ಒಂದು ಬದಿಗೆ ತಿರುಗಿರಲಿ.
  • ಮಗು ಸುರಕ್ಷಿತವಾಗಿ ಎದೆಗೆ ಅಂಟಿಕೊಂಡಿರುವಂತೆ ಹಿಡಿದುಕೊಳ್ಳಿ.
  • ತಾಯಿ ಅಥವಾ ತಂದೆ ನಿದ್ರಿಸುವಾಗ ಮಗುವನ್ನು ಎದೆ ಮೇಲೆ ಇಟ್ಟುಕೊಂಡೇ ಮಲಗಬಾರದು.
  • ಮಗುವಿನ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ವೈದ್ಯರ ಸಲಹೆ ಪಡೆಯಿರಿ.

Must Read

Skip to toolbar