ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳು ನಡೆಸಿದ ತೀವ್ರ ಪ್ರತಿಭಟನೆ ಹಾಗೂ ಘೋಷಣೆಗಳ ನಡುವೆಯೇ ಸಂಸತ್ತಿನ ಮುಂಗಾರು ಅಧಿವೇಶನದ 10ನೇ ದಿನದ ಕಲಾಪವೂ ಬಲಿಯಾಯಿತು.
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪದೇಪದೇ ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಉಭಯ ಸದನಗಳ ಕಲಾಪವನ್ನು ಸೋಮವಾರ (ಆಗಸ್ಟ್ 3)ಕ್ಕೆ ಮುಂದೂಡಲಾಯಿತು. ಶುಕ್ರವಾರ ಲೋಕಸಭೆಯಲ್ಲಿ ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಮಸೂದೆ–2026 ಹಾಗೂ ಸುಪ್ರೀಂ ಕೋರ್ಟ್ (ನ್ಯಾಯಮೂರ್ತಿಗಳ ಸಂಖ್ಯೆ) ತಿದ್ದುಪಡಿ ಮಸೂದೆ–2026ಗಳನ್ನು ಚರ್ಚಿಸಿ ಅಂಗೀಕರಿಸುವ ನಿರೀಕ್ಷೆ ಇತ್ತು.
ರಾಜ್ಯಸಭೆಯಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿ (ತಿದ್ದುಪಡಿ) ಮಸೂದೆ–2026 ಕುರಿತು ಚರ್ಚೆ ನಡೆಯಬೇಕಿತ್ತು. ಆದರೆ, ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷ ಸದಸ್ಯರು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ಘೋಷಣೆ ಕೂಗಲು ಆರಂಭಿಸಿದರು. ಇದರಿಂದ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪದೇಪದೇ ಗದ್ದಲ ಉಂಟಾಯಿತು.
ಲೋಕಸಭೆಯಲ್ಲಿ ಸಭಾಧ್ಯಕ್ಷ ಓಂ ಬಿರ್ಲಾ ಆರಂಭದಲ್ಲಿ ಕಲಾಪವನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಿದರು. ಬಳಿಕ ಕಲಾಪ ಪುನರಾರಂಭವಾದಾಗಲೂ ಗದ್ದಲ ಮುಂದುವರಿದ ಕಾರಣ ಕೊನೆಗೆ ಸೋಮವಾರದವರೆಗೆ ಮುಂದೂಡಲಾಯಿತು.
ರಾಜ್ಯಸಭೆಯಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಯಿತು. ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರು ಕಾಂಗ್ರೆಸ್ ಅಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸಲ್ಲಿಸಿದ್ದ ನಿಯಮ 267ರಡಿ ನೀಡಿದ್ದ ನೋಟಿಸ್ ಅನ್ನು ತಿರಸ್ಕರಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷ ಸದಸ್ಯರು ಘೋಷಣೆಗಳನ್ನು ಮುಂದುವರಿಸಿದರು.



