ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಆತಿಥ್ಯದಲ್ಲಿ ನಡೆಯಲಿರುವ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಸೆಪ್ಟೆಂಬರ್ನಲ್ಲಿ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.
2020 ರ ಗಾಲ್ವಾನ್ ಕಣಿವೆ ಭೀಕರ ಸಂಘರ್ಷ ಹಾಗೂ ವಾಸ್ತವ ನಿಯಂತ್ರಣ ರೇಖೆಯ ಮಿಲಿಟರಿ ಬಿಕ್ಕಟ್ಟಿನ ನಂತರ ಚೀನಾ ಅಧ್ಯಕ್ಷರು ಭಾರತಕ್ಕೆ ಆಗಮಿಸುತ್ತಿರುವುದು ಇದೇ ಮೊದಲ ಬಾರಿಯಾಗಿದ್ದು, ಈ ಭೇಟಿಯು ದ್ವಿಪಕ್ಷೀಯ ರಾಜತಾಂತ್ರಿಕತೆಯಲ್ಲಿ ಅತ್ಯಂತ ಐತಿಹಾಸಿಕ ಎಂದೇ ವಿಶ್ಲೇಷಿಸಲಾಗಿದೆ.
ಶೃಂಗಸಭೆ ಯಾವಾಗ?
2026 ರ ಬ್ರಿಕ್ಸ್ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಕ್ಸಿ ಜಿನ್‌ಪಿಂಗ್ ಅವರಿಗೆ ಅಧಿಕೃತ ಆಹ್ವಾನ ಕಳುಹಿಸಿದ್ದಾರೆ. ಈ ಬಾರಿಯ ಶೃಂಗಸಭೆಯು ಸೆಪ್ಟೆಂಬರ್ 12 ಮತ್ತು 13 ರಂದು ನವದೆಹಲಿಯ ಭಾರತ್ ಮಂಟಪಂನಲ್ಲಿ ನಡೆಯಲಿದ್ದು, ಕ್ಸಿ ಜಿನ್‌ಪಿಂಗ್ ಹೊರತಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಕೂಡ ಭಾಗವಹಿಸಲಿದ್ದಾರೆ.
ಕ್ಸಿ ಜಿನ್‌ಪಿಂಗ್ ಅವರು ಕೊನೆಯದಾಗಿ ಅಕ್ಟೋಬರ್ 2019 ರಲ್ಲಿ ತಮಿಳುನಾಡಿನ ಮಾಮಲ್ಲಾಪುರಂನಲ್ಲಿ ನಡೆದ ದ್ವಿತೀಯ ಅನೌಪಚಾರಿಕ ಶೃಂಗಸಭೆಗಾಗಿ ಭಾರತಕ್ಕೆ ಆಗಮಿಸಿದ್ದರು. ಆ ಭೇಟಿಯ ಕೇವಲ 6 ತಿಂಗಳಲ್ಲೇ ಲಡಾಖ್ ಗಡಿಯಲ್ಲಿ ಚೀನಾ ಸೇನೆಯ ಅತಿಕ್ರಮಣ ಹಾಗೂ ಗಾಲ್ವಾನ್ ಘರ್ಷಣೆಯಿಂದಾಗಿ ಉಭಯ ದೇಶಗಳ ಬಾಂಧವ್ಯ ಕಳೆದ ಆರು ದಶಕಗಳಲ್ಲೇ ಅತ್ಯಂತ ತಳಮಟ್ಟಕ್ಕೆ ಕುಸಿದಿತ್ತು.



