July 31, 2026
Friday, July 31, 2026
spot_img

ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ: ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

ಹೊಸದಿಗಂತ ವರದಿ ಕಾರವಾರ:

ಜನಸಾಮಾನ್ಯರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಭಾರತೀಯ ಜನತಾ ಪಕ್ಷದ ಕಾರವಾರ ಅಂಕೋಲಾ ಘಟಕಗಳ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯ ಎದುರು ಶುಕ್ರವಾರ ಭಾರೀ ಪ್ರತಿಭಟನೆ ನಡೆಯಿತು.

ನಗರದ ಮಿತ್ರ ಸಮಾಜ ಮೈದಾನದಿಂದ ಬಿಜೆಪಿ ಪ್ರಮುಖರು,ಕಾರ್ಯಕರ್ತರು ಮೆರವಣಿಗೆಯಲ್ಲಿ ಬಂದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆಯಲ್ಲಿ ಮಾತನಾಡಿದಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಶೂನ್ಯ ಆಡಳಿತ ನಡೆಸುತ್ತಿದ್ದು ಜನರ ಸಮಸ್ಯೆಗಳಿಗೆ ಯಾವುದೇ ರೀತಿಯ ಪರಿಹಾರ ಇಲ್ಲದಂತಾಗಿದೆ ಕೊಲೆಗಡುಕರಿಗೆ ರಕ್ಷಣೆ ನೀಡಿ ಅನ್ಯಾಯಕ್ಕೀಡಾದವರನ್ನು ಬಲಿಕೊಡುವಂತ ಕೆಲಸ ನಡೆಯುತ್ತಿದೆ ಎಂದು ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ಗ್ರಾಮೀಣ ಭಾಗಗಳಿಗೆ ಸರಿಯಾದ ಬಸ್ಸುಗಳ ಸೇವೆ ಇಲ್ಲದೇ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಿಕ್ಷಣ ಸಂಸ್ಥೆಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ,ಗುಜರಿ ಬಸ್ಸುಗಳನ್ನು ಬಿಡಲಾಗುತ್ತಿದ್ದು ರಸ್ತೆ ಮಧ್ಯೆ ಕೆಟ್ಟು ನಿಲ್ಲುತ್ತಿವೆ, ರಸ್ತೆಗಳು ಸಂಪೂರ್ಣ ಕೆಟ್ಟು ಹೊಂಡಗಳು ಬಿದ್ದಿವೆ ಎಂದ ಅವರು ಸರ್ಕಾರದಿಂದ ಅಧಿಕಾರ ದುರುಪಯೋಗವಾಗುತ್ತಿದೆ, ಸಾರ್ವಜನಿಕರ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ, ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ,ಅಧಿಕಾರಿಗಳು ಸರ್ಕಾರದ ಕೈಗೊಂಬೆಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:

ಜಿಲ್ಲಾಧಿಕಾರಿ ಕಚೇರಿಯ ಹೊರ ಆವರಣದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಪ್ರಮುಖರು ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು ಆದರೆ ಜಿಲ್ಲಾಧಿಕಾರಿ ಬರದೇ ಇರುವುದು ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಯಿತು.

ಜಿಲ್ಲಾಧಿಕಾರಿ ಕಚೇರಿಯ ಗೇಟನ್ನು ತಳ್ಳಿ ಒಳ ನುಗ್ಗಿದ ಕಾರ್ಯಕರ್ತರು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ಕುಳಿತ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಬಂದು ಮನವಿ ಸ್ವೀಕರಿಸುವ ವರೆಗೆ ಧರಣಿ ನಡೆಸುವುದಾಗಿ ಪಟ್ಟು ಹಿಡಿದರು.

ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೂಪಾಲಿ ನಾಯ್ಕ ಅವರು ಜನಸಾಮಾನ್ಯರ ಮನವಿ ಸ್ವಿಕರಿಸಲು ಜಿಲ್ಲಾಧಿಕಾರಿಗೆ ಸಮಯವಿಲ್ಲ ಎಂದರೆ ಜಿಲ್ಲಾಡಳಿತದ ಸ್ಥಿತಿ ಎಲ್ಲಿಗೆ ತಲುಪಿದೆ ಎನ್ನುವುದು ತಿಳಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಡಳಿತದ ವಿರುದ್ಧ ಕಾರ್ಯಕರ್ತರಿಂದ ಘೋಷಣೆಗಳು ಕೇಳಿ ಬಂದವು.ಕೊನೆಗೂ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರು ಬಂದು ಮನವಿ ಸ್ವೀಕರಿಸುವುದರೊಂದಿಗೆ ಧರಣಿಯನ್ನು ಕೊನೆಗೊಳಿಸಲಾಯಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !