ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯ ಸೇತುಪತಿ ಅವರ ಮುಂಬರುವ ತಮಿಳು ಸಿನಿಮಾ ‘ಬತ್ತಾ’ ಚಿತ್ರದ ಆಡಿಯೋ ಲಾಂಚ್ ಇತ್ತೀಚೆಗೆ ಚೆನ್ನೈನಲ್ಲಿ ಜರುಗಿದ್ದು, ತಮಿಳು ಚಿತ್ರರಂಗದ ಪ್ರಮುಖ ನಿರ್ದೇಶಕರು ಈ ವೇದಿಕೆಯಲ್ಲಿ ಒಂದಾಗಿದ್ದರು. ಈ ಕಾರ್ಯಕ್ರಮದಲ್ಲಿ ಯುವ ನಿರ್ದೇಶಕ ಸಿಬಿ ಚಕ್ರವರ್ತಿ ಅವರು ನಿರ್ದೇಶಕ ಅಟ್ಲೀ ಹಾಗೂ ಅವರ ಮುಂಬರುವ ಬಿಗ್ ಬಜೆಟ್ ಸಿನಿಮಾ ‘ರಾಕಾ’ ಬಗ್ಗೆ ಆಡಿದ ಮಾತುಗಳು ಈಗ ಇಡೀ ಸೌತ್ ಇಂಡಸ್ಟ್ರಿಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ.
ನಿರ್ದೇಶಕ ಸಿಬಿ ಚಕ್ರವರ್ತಿ, ಅಟ್ಲಿ ಅವರ ಮುಂದಿನ ಬಿಗ್ ಬಜೆಟ್ ಸಿನಿಮಾ ‘ರಾಕಾ’ ಬಗ್ಗೆ ಆಡಿದ ಮಾತುಗಳು ಈಗ ಫುಲ್ ವೈರಲ್ ಆಗುತ್ತಿವೆ.
ವೇದಿಕೆ ಮೇಲೆ ಮಾತನಾಡಿದ ಸಿಬಿ ಚಕ್ರವರ್ತಿ, “ಅಟ್ಲಿ ಸರ್ ನನಗೆ ‘ರಾಕಾ’ ಸಿನಿಮಾದ ಕೆಲವು ವಿಷುಯಲ್ಸ್ ತೋರಿಸಿದ್ರು, ಜೇಮ್ಸ್ ಕ್ಯಾಮರೂನ್ ಅವರ ‘ಅವತಾರ್’ ಸಿನಿಮಾದಲ್ಲೂ ಅಂತಹ ವಿಷುಯಲ್ಸ್ ಇಲ್ಲವೇನೋ ಅನಿಸಿಬಿಡ್ತು. ಅಷ್ಟು ಅದ್ಭುತವಾಗಿ, ಮೈ ನವಿರೇಳಿಸುವಂತೆ ಬಂದಿದೆ” ಎಂದು ಓಪನ್ ಆಗಿ ಹೊಗಳಿದ್ದಾರೆ. ಅಲ್ಲದೇ, “ಇನ್ನೊಂದೆರಡು ದಿನದಲ್ಲಿ ಅಂದರೆ ಸೆಪ್ಟೆಂಬರ್ 21ಕ್ಕೆ ಅಟ್ಲಿ ಸರ್ ಬರ್ತ್ಡೇ ಇದೆ. ಅಂದು ರಿಲೀಸ್ ಆಗಲಿರೋ ಗ್ಲಿಂಪ್ಸ್ ನೋಡಿದರೆ ನಾನು ಹೇಳಿದ್ದು ಎಷ್ಟು ನಿಜ ಎಂದು ನಿಮಗೇ ಗೊತ್ತಾಗುತ್ತೆ” ಎಂದು ಹೇಳುವ ಮೂಲಕ ಅಭಿಮಾನಿಗಳ ಕುತೂಹಲವನ್ನು ಡಬಲ್ ಮಾಡಿದ್ದಾರೆ.
ಇಷ್ಟಕ್ಕೇ ನಿಲ್ಲಿಸದ ಸಿಬಿ ಚಕ್ರವರ್ತಿ, ಅಟ್ಲಿಯನ್ನು ನೇರವಾಗಿ ಎಸ್ಎಸ್ ರಾಜಮೌಳಿಗೆ ಹೋಲಿಸಿದ್ದಾರೆ. “ಎಸ್.ಎಸ್. ರಾಜಮೌಳಿ ಸರ್ ಹೇಗೆ ಭಾರತೀಯ ಸಿನಿಮಾವನ್ನು ನೆಕ್ಸ್ಟ್ ಲೆವೆಲ್ಗೆ ತಗೊಂಡು ಹೋದ್ರೋ, ಅದೇ ರೀತಿ ನಮ್ಮ ಅಟ್ಲಿ ಸರ್ ಭಾರತೀಯ ಸಿನಿಮಾವನ್ನು ವರ್ಲ್ಡ್ ಮ್ಯಾಪ್ನಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ. ನಾನು ಇವರ ಶಿಷ್ಯ ಎಂದು ಹೇಳಿಕೊಳ್ಳೋಕೆ ನಂಗೆ ಹೆಮ್ಮೆ ಅನಿಸುತ್ತೆ” ಎಂದರು.
ಅಂದಹಾಗೆ, ಅಲ್ಲು ಅರ್ಜುನ್ ಮತ್ತು ದೀಪಿಕಾ ಪಡುಕೋಣೆ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಈ ‘ರಾಕಾ’ ಸಿನಿಮಾ ಆಕ್ಷನ್ ಥ್ರಿಲ್ಲರ್ ಆಗಿದ್ದು, ಹೈ-ವೋಲ್ಟೇಜ್ ವಿಷುಯಲ್ಸ್ಗೆ ಹೆಸರಾಗಿದೆ. ಸೆಪ್ಟೆಂಬರ್ 21ರ ಅಟ್ಲಿ ಹುಟ್ಟುಹಬ್ಬದಂದು ಈ ಸಿನಿಮಾದ ಮೊದಲ ಝಲಕ್ ಹೊರಬರಲಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹೈಪ್ ಕ್ರಿಯೇಟ್ ಮಾಡುವುದು ಖಂಡಿತ ಎನ್ನಲಾಗುತ್ತಿದೆ.



