July 31, 2026
Friday, July 31, 2026
spot_img

ಕರಜಗಿ ವಸತಿ ಶಾಲೆ ಪ್ರಕರಣ: ಅಸ್ವಸ್ಥಗೊಂಡಿದ್ದ 55 ವಿದ್ಯಾರ್ಥಿಗಳು ಗುಣಮುಖ; ಪ್ರೀತಿ ದೊಡ್ಡಮನಿ ಮಾಹಿತಿ

ಹೊಸದಿಗಂತ ವರದಿ ಕಲಬುರಗಿ:

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಕರಜಗಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಉಪಹಾರ ಸೇವಿಸಿದ ಬಳಿಕ ಅಸ್ವಸ್ಥಗೊಂಡಿದ್ದ 55 ವಿದ್ಯಾರ್ಥಿಗಳು ಸಂಪೂರ್ಣ ಗುಣಮುಖರಾಗಿದ್ದು, ಎಲ್ಲರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ ತಿಳಿಸಿದ್ದಾರೆ.

ಜುಲೈ 30ರಂದು ಬೆಳಿಗ್ಗೆ ವಿದ್ಯಾರ್ಥಿಗಳು ಉಪಹಾರ ಸೇವಿಸಿದ ನಂತರ ಅಸ್ವಸ್ಥಗೊಂಡ ಹಿನ್ನೆಲೆ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಘಟನೆ ತಿಳಿಯುತ್ತಿದ್ದಂತೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ವಿದ್ಯಾರ್ಥಿಗಳ ಆರೋಗ್ಯದ ಮಾಹಿತಿ ಪಡೆದಿದ್ದರು.

ವೈದ್ಯರ ನಿರಂತರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಪಡೆದ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಶೀಘ್ರ ಸುಧಾರಣೆ ಕಂಡುಬಂದಿದ್ದು, ಪ್ರಸ್ತುತ ಯಾವುದೇ ವಿದ್ಯಾರ್ಥಿಗೆ ಆರೋಗ್ಯ ಸಮಸ್ಯೆ ಇಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಎಲ್ಲ ವಿದ್ಯಾರ್ಥಿಗಳು ಆಸ್ಪತ್ರೆಯಿಂದ ಬಿಡುಗಡೆಯಾಗಿ ವಸತಿ ಶಾಲೆಗೆ ಮರಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಾಂಶುಪಾಲರು ಹಾಗೂ ನಿಲಯಪಾಲಕರ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳುವಂತೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘಕ್ಕೆ ಶಿಫಾರಸು ಸಲ್ಲಿಸಲಾಗಿದೆ. ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ ಗ್ರೂಪ್-ಡಿ ಸಿಬ್ಬಂದಿಯನ್ನು ತೆರವುಗೊಳಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !