September 19, 2026
Saturday, September 19, 2026
spot_img

CINE | ಬಾಕ್ಸ್ ಆಫೀಸ್‌ನಲ್ಲಿ 3000 ಕೋಟಿ ಗಳಿಸಿದರೂ ಆಸ್ಕರ್‌ಗೆ ‘ಧುರಂಧರ್’ ಯಾಕೆ ಸೆಲೆಕ್ಟ್ ಆಗ್ಲಿಲ್ಲ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿನಿಮಾ ಲೋಕದಲ್ಲಿ ಅತೀ ದೊಡ್ಡ ಪ್ರಶಸ್ತಿ ಅಂದ್ರೆ ಅದು ಆಸ್ಕರ್. ಈ ಸಲ 99ನೇ ಅಕಾಡೆಮಿ ಅವಾರ್ಡ್ಸ್ ರೇಸ್‌ಗೆ ಭಾರತದಿಂದ ಅಧಿಕೃತವಾಗಿ ಮರಾಠಿಯ ‘ಗೋಂಧಲ್’ ಸಿನಿಮಾ ಆಯ್ಕೆಯಾಗಿದೆ. ಆದ್ರೆ ಸುದ್ದಿ ಇದಲ್ಲ, ಬಾಕ್ಸ್ ಆಫೀಸ್ ಶೇಕ್ ಮಾಡಿ, ಕಲೆಕ್ಷನ್‌ನಲ್ಲಿ ಸುಮಾರು 3,000 ಕೋಟಿ ರೂಪಾಯಿ ಬಾಚಿಕೊಂಡಿದ್ದ ರಣ್‌ವೀರ್ ಸಿಂಗ್ ಅಭಿನಯದ, ಆದಿತ್ಯ ಧಾರ್ ನಿರ್ದೇಶನದ ಸೂಪರ್ ಹಿಟ್ ‘ಧುರಂಧರ್’ ಸಿನಿಮಾವನ್ನ ಹಿಂದಿಕ್ಕಿ ಈ ಮರಾಠಿ ಸಿನಿಮಾ ಆಸ್ಕರ್ ಟಿಕೆಟ್ ಗಿಟ್ಟಿಸಿಕೊಂಡಿದೆ.

ಅಷ್ಟೊಂದು ಕೋಟಿ ಗಳಿಸಿದ ಸಿನಿಮಾ ಬಿಟ್ಟು, ಈ ಸಿನಿಮಾನ ಯಾಕೆ ಸೆಲೆಕ್ಟ್ ಆಯ್ತು? ಎಂದು ಮಾಸ್ ಆಡಿಯನ್ಸ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಶುರುವಾಗಿತ್ತು. ಈಗ ಆ ರಹಸ್ಯವನ್ನು ಚಲನಚಿತ್ರ ಫೆಡರೇಶನ್‌ನ ಜ್ಯೂರಿ ಸದಸ್ಯ ವಿವೇಕ್ ವಾಸ್ವಾನಿ ಬಿಚ್ಚಿಟ್ಟಿದ್ದಾರೆ.

ವಿವೇಕ್ ವಾಸ್ವಾನಿ ಹೇಳುವ ಪ್ರಕಾರ, ಭಾರತದಿಂದ ಸಲ್ಲಿಕೆಯಾಗಿದ್ದ ಒಟ್ಟು 33 ಸಿನಿಮಾಗಳ ನಡುವೆ ಆಸ್ಕರ್ ಟಿಕೆಟ್‌ಗಾಗಿ ತೀವ್ರ ಪೈಪೋಟಿ ಇತ್ತು. ಒಟ್ಟು 14 ಜನರಿದ್ದ ಜ್ಯೂರಿ ತಂಡದಲ್ಲಿ ‘ಧುರಂಧರ್’ ಪರವಾಗಿ ಮತ ಹಾಕಿದ್ದು ಕೇವಲ 4 ಜನ ಮಾತ್ರ. “ಜ್ಯೂರಿಯಲ್ಲಿ ಇದ್ದ ಕೆಲವರಿಗೆ ಸಿನಿಮಾ ತುಂಬಾ ಇಷ್ಟ ಆಯ್ತು ನಿಜ. ಆದ್ರೆ ಆಸ್ಕರ್ ಮಟ್ಟದಲ್ಲಿ ಭಾರತದ ನಿಜವಾದ ಸಂಸ್ಕೃತಿ, ಮಣ್ಣಿನ ವಾಸನೆ ಮತ್ತು ಕಥೆಯ ಸತ್ವವನ್ನು ಪ್ರತಿನಿಧಿಸುವ ವಿಷಯದಲ್ಲಿ ‘ಧುರಂಧರ್’ ಸ್ವಲ್ಪ ಹಿಂದುಳಿಯಿತು. ಬರೀ ಮಾಸ್, ಆಕ್ಷನ್ ಮತ್ತೆ ದೊಡ್ಡ ಕಮರ್ಷಿಯಲ್ ಗೆಲುವು ಒಂದೇ ಆಸ್ಕರ್ ಗಿಟ್ಟಿಸಲು ಸಾಲಲ್ಲ” ಎಂದು ವಿವೇಕ್ ಸ್ಪಷ್ಟವಾಗಿ ಹೇಳಿದ್ದಾರೆ.

ಕೊನೆ ಹಂತದ ರೇಸ್‌ನಲ್ಲಿ ಮರಾಠಿಯ ‘ಗೋಂಧಲ್’, ‘ಅಂಗ್’ ಮತ್ತು ‘ಮೈನೆ ವಾಪಸ್ ಆಯೇಗಾ’ ಸಿನಿಮಾಗಳು ಉಳಿದುಕೊಂಡಿದ್ದವು. ಅಂತಿಮವಾಗಿ ಜ್ಯೂರಿಗಳ ಮನ ಗೆದ್ದು ಆಸ್ಕರ್‌ಗೆ ಆಯ್ಕೆಯಾಗಿದ್ದು ಮರಾಠಿಯ ‘ಗೋಂಧಲ್’.

ಏನಿದು ‘ಗೋಂಧಲ್’ ಮ್ಯಾಜಿಕ್?

ಸಂತೋಷ್ ದವಾಖರ್ ನಿರ್ದೇಶನದ ‘ಗೋಂಧಲ್’ ಸಿನಿಮಾ ಮಹಾರಾಷ್ಟ್ರದ ಸಾಂಪ್ರದಾಯಿಕ ಜಾನಪದ ಕಲೆ ಮತ್ತು ಗ್ರಾಮೀಣ ಸಂಸ್ಕೃತಿಯ ಹಿನ್ನೆಲೆ ಹೊಂದಿದೆ. ರಾತ್ರಿಯಿಡೀ ನಡೆಯುವ ಸಾಂಪ್ರದಾಯಿಕ ಪೂಜೆ, ವಿಧಿವಿಧಾನಗಳು ಹಾಗೂ ಜನರ ನಂಬಿಕೆಗಳನ್ನು ಅತ್ಯಂತ ನೈಜವಾಗಿ ತೆರೆದಿಟ್ಟಿದೆ. ಈ ಚಿತ್ರದ ಮಣ್ಣಿನ ಸೊಗಡು, ಅದ್ಭುತ ಮೇಕಿಂಗ್ ಮತ್ತು ಇಳಯರಾಜ ಅವರ ಹಿನ್ನೆಲೆ ಸಂಗೀತ ಜ್ಯೂರಿಗಳ ಹೃದಯ ಗೆದ್ದಿದೆ. ಈಗಾಗಲೇ ಹಲವು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಪ್ರಶಸ್ತಿ ಬಾಚಿಕೊಂಡಿರುವ ಈ ಸಿನಿಮಾ, ಭಾರತೀಯ ಸಂಸ್ಕೃತಿಯನ್ನು ವಿಶ್ವದ ಮುಂದೆ ಎತ್ತಿ ಹಿಡಿಯಲು ಸೂಕ್ತ ಸಿನಿಮಾ ಎಂದು ಜ್ಯೂರಿ ತೀರ್ಮಾನಿಸಿದೆ.

ಥಿಯೇಟರ್‌ನಲ್ಲಿ ಸಾವಿರ ಕೋಟಿ ಕಲೆಕ್ಷನ್ ಮಾಡಿ ಜನರನ್ನ ಕುಣಿಸೋದು ಬೇರೆ, ಆಸ್ಕರ್ ತರಹದ ಜಾಗತಿಕ ವೇದಿಕೆಯಲ್ಲಿ ಭಾರತದ ಕಥೆ-ಸಂಸ್ಕೃತಿ ಸಾರೋದು ಬೇರೆ. ಕೇವಲ ಕಮರ್ಷಿಯಲ್ ಧೂಳೆಬ್ಬಿಸಿದರೆ ಸಾಲದು, ಕಥೆಯಲ್ಲಿ ಮಣ್ಣಿನ ಸತ್ವ ಇರಬೇಕು ಎಂಬುದನ್ನು ಈ ಆಸ್ಕರ್ ಆಯ್ಕೆ ಮತ್ತೊಮ್ಮೆ ನಿರೂಪಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !