July 31, 2026
Friday, July 31, 2026
spot_img

ಕೊಲ್ಲಾಪುರ ಮಳೆಯ ಎಫೆಕ್ಟ್: ಬೆಳಗಾವಿ ಜಿಲ್ಲೆಯ ನದಿಗಳಲ್ಲಿ ಹೆಚ್ಚಿದ ಒಳಹರಿವು

ಹೊಸದಿಗಂತ ವರದಿ ಬೆಳಗಾವಿ:

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆ ಮುಂದುವರಿದಿದ್ದು, ಈ ಭಾಗದ ಪ್ರಮುಖ ಜಲಾಶಯಗಳಲ್ಲಿ ಒಂದಾದ ರಾಧಾನಗರಿ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದೆ. ಜಲಾಶಯವು ತನ್ನ ಗರಿಷ್ಠ ಸಂಗ್ರಹಣಾ ಸಾಮರ್ಥ್ಯವನ್ನು ತಲುಪಿರುವುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಮುನ್ನೆಚ್ಚರಿಕಾ ಕ್ರಮವಾಗಿ ಮಧ್ಯರಾತ್ರಿಯಿಂದಲೇ ನದಿಗೆ ಅಪಾರ ಪ್ರಮಾಣದ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ.

ನದಿಗಳಲ್ಲಿ ನೀರಿನ ಪ್ರಮಾಣ ಏರಿಕೆ:

ಜಲಾಶಯದಿಂದ ಬಾಗಿಲು ತೆರೆದು ನೀರು ಬಿಡುತ್ತಿರುವುದರಿಂದ, ಕರ್ನಾಟಕದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕುಗಳ ಮೂಲಕ ಹರಿಯುವ ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿಗಳಲ್ಲಿ ಒಳಹರಿವಿನ ಪ್ರಮಾಣ ದಿಢೀರ್ ಏರಿಕೆಯಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಈ ನದಿಗಳ ನೀರಿನ ಮಟ್ಟದಲ್ಲಿ ಸುಮಾರು 2 ಅಡಿಯಷ್ಟು ಏರಿಕೆಯಾಗಿದೆ.

ನೀರು ಬಿಡುಗಡೆ ಪ್ರಮಾಣ:

ಪ್ರಸ್ತುತ ರಾಧಾನಗರಿ ಜಲಾಶಯದ 6ನೇ ಗೇಟ್ ಮೂಲಕ 1,400 ಕ್ಯೂಸೆಕ್ಸ್ ಹಾಗೂ ಜಲವಿದ್ಯುತ್ ಉತ್ಪಾದನಾ ಘಟಕದ ಮೂಲಕ 1,400 ಕ್ಯೂಸೆಕ್ಸ್ ಸೇರಿ ಒಟ್ಟು 2,800 ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದರ ಪರಿಣಾಮವಾಗಿ ಕಲ್ಲೋಳ ಬ್ಯಾರೇಜ್ ಬಳಿ ಬರೋಬ್ಬರಿ 92,000 ಕ್ಯೂಸೆಕ್ಸ್ ಒಳಹರಿವು ದಾಖಲಾಗಿದ್ದು, ಮಳೆ ಹೀಗೆಯೇ ಮುಂದುವರಿದರೆ ಮತ್ತು ಜಲಾಶಯದಿಂದ ಹೆಚ್ಚುವರಿ ನೀರು ಹರಿಸಿದರೆ ಮುಂದಿನ ಕೆಲವೇ ಗಂಟೆಗಳಲ್ಲಿ ನದಿಗಳ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:

ಸಾರ್ವಜನಿಕರು ಹಾಗೂ ರೈತರಿಗೆ ಜಾಗೃತಿ ಕರೆ:

ಸ್ಥಿತಿ-ಗತಿಯನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯ ಜಿಲ್ಲಾಡಳಿತವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ನದಿ ಪಾತ್ರದ ನಿವಾಸಿಗಳು: ನದಿ ತೀರದ ಮತ್ತು ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಹಾಗೂ ರೈತರು ಸದಾ ಎಚ್ಚರಿಕೆಯಿಂದ ಇರಬೇಕು.

ಅನಗತ್ಯ ತೆರಳುವಿಕೆ ಬೇಡ:

ಸಾರ್ವಜನಿಕರು, ಕುತೂಹಲಕ್ಕಾಗಲಿ ಅಥವಾ ಇನ್ಯಾವುದೇ ಕೆಲಸಕ್ಕಾಗಲಿ ನದಿ ತೀರದ ತಗ್ಗು ಪ್ರದೇಶಗಳಿಗೆ ತೆರಳದಂತೆ ಮನವಿ ಮಾಡಲಾಗಿದೆ.

ದನ-ಕರುಗಳ ರಕ್ಷಣೆ:

ನದಿ ದಂಡೆಯ ಬಳಿ ಜಾನುವಾರುಗಳನ್ನು ಮೇಯಿಸಲು ಕರೆದೊಯ್ಯಬಾರದು ಎಂದು ಸೂಚಿಸಲಾಗಿದೆ. ಪರಿಸ್ಥಿತಿಯನ್ನು ಅಧಿಕಾರಿಗಳು ನಿಕಟವಾಗಿ ವೀಕ್ಷಿಸುತ್ತಿದ್ದು, ನದಿ ತೀರದ ಗ್ರಾಮಗಳಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !