ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇಷ್ಟು ಸಮಯವಾದರೂ ಸೂಕ್ತವಾದ ಪರಿಹಾರ ಸಿಕ್ಕಿಲ್ಲವೆಂದು ರೈತರ ತಾಳ್ಮೆಯ ಕಟ್ಟೆ ಒಡೆಯುತ್ತಿದೆ. ನಿನ್ನೆ ಬೆಳಗಾವಿ ಜಿಲ್ಲಾಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದ ಸಭೆ ವಿಫಲವಾಗಿದ್ದು, ಇಂದು ಸಿಎಂ ಖುದ್ದು ಮಾತುಕತೆ ನಡೆಸಲಿದ್ದಾರೆ. ಸಿಎಂ ಜೊತೆ ಮಾತುಕತೆ ಇರುವ ಕಾರಣ ಕಬ್ಬಿದ ದರ ನಿಗದಿ ಕುರಿತು ಘೋಷಣೆ ಹೊರಬೀಳುವ ಸಾಧ್ಯತೆ ಇದೆ.
ಟನ್ ಕಬ್ಬಿಗೆ ಐದೂವರೆ ಸಾವಿರ ರೂಪಾಯಿ ನಿಗದಿ ಮಾಡಬೇಕೆಂದು ರೈತರು ಆಗ್ರಹಿಸಿದ್ದು, ಹೆದ್ದಾರಿ ಬಂದ್, ಪಾದಯಾತ್ರೆ, ಕರ್ನಾಟಕ ಬಂದ್, ಜೈಲ್ ಭರೋ ಚಳವಳಿಗಳನ್ನು ಕೂಡ ನಡೆಸಿದ್ದಾರೆ. ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಈಗಾಗಲೇ ರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಎರಡು ಬಾರಿ ಸಭೆ ನಡೆಸಲಾಗಿದೆ. ಆದರೆ ಎರಡು ಬಾರಿಯೂ ಸಭೆ ವಿಫಲವಾಗಿದೆ.
ಕಬ್ಬಿನ ಬೆಲೆ ನಿಗದಿ ವಿಚಾರವಾಗಿ ಹಾವೇರಿಯಲ್ಲೂ ರೈತರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ನಡುವೆ ನಡೆದ ಸಭೆ ವಿಫಲವಾಗಿದೆ. ಮತ್ತೊಂದೆಡೆ ಮೈಸೂರು ಮತ್ತು ಮಂಡ್ಯದಲ್ಲೂ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಯುತ್ತಿರುವ ಕಾರಣ ಪರಿಹಾರ ಸಿಗುವ ಸಾಧ್ಯತೆ ಇದೆ. ಸಿಎಂ ಹಾಗೂ ಹೋರಾಟಗಾರರು ಒಂದೇ ನಿರ್ಧಾರಕ್ಕೆ ಬರುತ್ತಾರೋ ಇಲ್ಲವೋ ಕಾದುನೋಡಬೇಕಿದೆ.



