ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶದ ಕೈಗಾರಿಕಾ ಮತ್ತು ಆರ್ಥಿಕ ಪ್ರಗತಿಗೆ ವೇಗ ನೀಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಶನಿವಾರ (ಆ.1) ವಿಜಯನಗರಂ ಜಿಲ್ಲೆಯ ಭೋಗಾಪುರಂನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ‘ಅಲ್ಲುರಿ ಸೀತಾರಾಮ ರಾಜು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ವನ್ನು ದೇಶಕ್ಕೆ ಸಮರ್ಪಿಸಿದ್ದಾರೆ. ಸುಮಾರು 5,000 ಕೋಟಿ ರೂ. ವೆಚ್ಚದ ಈ ಬೃಹತ್ ಯೋಜನೆ ಉತ್ತರ ಆಂಧ್ರ ಭಾಗವನ್ನು ಪ್ರಮುಖ ಆರ್ಥಿಕ ಮತ್ತು ಕೈಗಾರಿಕಾ ಹಬ್ ಆಗಿ ಪರಿವರ್ತಿಸಲಿದೆ ಎಂದು ರಾಜ್ಯ ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.
13,500 ಬುಡಕಟ್ಟು ಮಹಿಳೆಯರಿಂದ ಸಾಂಪ್ರದಾಯಿಕ ಸ್ವಾಗತ:
ವಿಮಾನ ನಿಲ್ದಾಣದ ಆವರಣಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಗೆ ಆಂಧ್ರಪ್ರದೇಶ ಸರ್ಕಾರ ಹಾಗೂ ಸ್ಥಳೀಯ ಜನರಿಂದ ಅದ್ಧೂರಿ ಮತ್ತು ಸಾಂಪ್ರದಾಯಿಕ ಸ್ವಾಗತ ಸಿಕ್ಕಿತು. ಪ್ರಮುಖ ಆಕರ್ಷಣೆಯಾಗಿ ಬರೋಬ್ಬರಿ 13,500 ಬುಡಕಟ್ಟು ಮಹಿಳೆಯರು ಒಟ್ಟಾಗಿ ಆಂಧ್ರದ ಸಾಂಪ್ರದಾಯಿಕ ‘ಧಿಂಸಾ’ ನೃತ್ಯ ಪ್ರದರ್ಶಿಸುವ ಮೂಲಕ ಪ್ರಧಾನಿಯವರನ್ನು ಬರಮಾಡಿಕೊಂಡರು.
ಇದನ್ನೂ ಓದಿ:
ಕಲೆ ಮತ್ತು ಸಂಸ್ಕೃತಿಯ ಅನಾವರಣ:
ಹೊಸ ವಿಮಾನ ನಿಲ್ದಾಣದ ಆವರಣವನ್ನು ಆಂಧ್ರಪ್ರದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಕಲಾಕೃತಿಗಳಿಂದ ಅಲಂಕರಿಸಲಾಗಿತ್ತು. ವಿಶ್ವಪ್ರಸಿದ್ಧ ‘ಏಟಿಕೊಪ್ಪಾಕ’ ಮರದ ಆಟಿಕೆಗಳ ಕಲಾಕೃತಿಗಳು ಹಾಗೂ ಆಂಧ್ರದ ಭೌಗೋಳಿಕ ಗುರುತನ್ನು ಸಾರುವ ವಿಶಿಷ್ಟ ವಿನ್ಯಾಸಗಳು ವಿಮಾನ ನಿಲ್ದಾಣದ ಸೌಂದರ್ಯವನ್ನು ಹೆಚ್ಚಿಸಿದ್ದವು. ಈ ವಿಮಾನ ನಿಲ್ದಾಣದ ಆರಂಭದಿಂದಾಗಿ ಉತ್ತರ ಆಂಧ್ರ ಭಾಗದ ಪ್ರವಾಸೋದ್ಯಮ ಮತ್ತು ಉದ್ಯೋಗಾವಕಾಶಗಳಿಗೆ ಭಾರಿ ಮನ್ನಣೆ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.



