ಹೊಸದಿಗಂತ ವರದಿ ಬೆಳಗಾವಿ :
ಜಿಲ್ಲೆಯ ಬೈಲಹೊಂಗಲ ತಾಲೂಕಿನ ಜಾಲಿಕ್ಕೊಪ್ಪ ಗ್ರಾಮದ ಸಮೀಪ ಕಾರೊಂದು ಕುರಿಗಳ ಹಿಂಡಿನೊಳಗೆ ನುಗ್ಗಿದ ಪರಿಣಾಮ 48ಕ್ಕೂ ಹೆಚ್ಚು ಕುರಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಕುರಿಗಳು ಗಂಭೀರವಾಗಿ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಕೆಂಗಾನೂರ ಗ್ರಾಮದ ಚಂದ್ರಪ್ಪ ರಾಯಪ್ಪ ಹಿತ್ತಲಮನಿ ಹಾಗೂ ದೊಡವಾಡ ಗ್ರಾಮದ ಬೀರಪ್ಪ ಅವರಿಗೆ ಸೇರಿದ ಕುರಿಗಳ ಹಿಂಡನ್ನು ನಯಾನಗರ ಸಮೀಪದ ಮಲಪ್ರಭಾ ನದಿಯ ದಂಡೆಯ ಬಳಿ ಮೇಯಿಸಿ, ರಾತ್ರಿ ಸುಮಾರು 12 ಗಂಟೆಗೆ ಕೆಂಗಾನೂರ ಗ್ರಾಮದತ್ತ ಕರೆದುಕೊಂಡು ಬರುತ್ತಿದ್ದ ವೇಳೆ, ಬೈಲಹೊಂಗಲದಿಂದ ಬೆಳವಡಿ ಕಡೆಗೆ ವೇಗವಾಗಿ ಸಾಗುತ್ತಿದ್ದ ಕೆಎ–48 ಎಂ–1789 ಸಂಖ್ಯೆಯ ಟಾಟಾ ಇಂಡಿಗೋ ಕಾರು ಕುರಿಗಳ ಹಿಂಡಿನೊಳಗೆ ನುಗ್ಗಿದೆ.
ಅಪಘಾತದ ತೀವ್ರತೆಗೆ 48ಕ್ಕೂ ಹೆಚ್ಚು ಕುರಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಕುರಿಗಳು ಗಂಭೀರವಾಗಿ ಗಾಯಗೊಂಡಿವೆ. ಕೆಲ ಗರ್ಭಿಣಿ ಕುರಿಗಳ ಹೊಟ್ಟೆ ಸೀಳಿ ಮರಿಗಳು ಹೊರಬಂದ ದೃಶ್ಯ ಸ್ಥಳೀಯರನ್ನು ಕಣ್ಣೀರಾಗುವಂತೆ ಮಾಡಿತು. ರಸ್ತೆ ತುಂಬಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಕುರಿಗಳ ಮೃತದೇಹಗಳು ಹಾಗೂ ಗಾಯಗೊಂಡ ಕುರಿಗಳ ನರಳಾಟ ಮನಕಲಕುವಂತಿತ್ತು.
ಘಟನೆಯಿಂದ ಕುರಿ ಸಾಕಾಣಿಕೆಯನ್ನು ನಂಬಿ ಜೀವನ ಸಾಗಿಸುತ್ತಿದ್ದ ಕುರಿಗಾಹಿಗಳ ಕುಟುಂಬಕ್ಕೆ ಸುಮಾರು ₹20 ಲಕ್ಷಕ್ಕೂ ಅಧಿಕ ಆರ್ಥಿಕ ನಷ್ಟ ಸಂಭವಿಸಿದೆ. ತಮ್ಮ ಬದುಕಿನ ಆಧಾರವಾಗಿದ್ದ ಕುರಿಗಳನ್ನು ಕಳೆದುಕೊಂಡ ಮಾಲೀಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಅಪಘಾತದ ಬಳಿಕ ಕಾರು ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಸಮಾಜಸೇವಕ ಮಲ್ಲಿಕಾರ್ಜುನ ಗಾಣಿಗೇರ ಹಾಗೂ 112 ತುರ್ತು ಸೇವೆಯ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ, ಸುಮಾರು ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಸ್ತೆ ಮೇಲೆ ಬಿದ್ದಿದ್ದ ಮೃತ ಕುರಿಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು. ಬೈಲಹೊಂಗಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.



