August 26, 2026
Wednesday, August 26, 2026
spot_img

ಹೆಚ್ಚುವರಿ ಅಣೆಕಟ್ಟು ಕಟ್ಟಿ ನೀರನ್ನು ಸಂಗ್ರಹಿಸಿ: ಮಂಡ್ಯದಲ್ಲಿ ಮುಂದುವರಿದ ಕಾವೇರಿ ಚಳವಳಿ

ಹೊಸದಿಗಂತ ವರದಿ ಮಂಡ್ಯ:

ಬೆಳಗ್ಗೆಯಿಂದಲೇ ನಗರದ ಜೆ.ಜೆ ವೃತ್ತದಲ್ಲಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಜಮಾಯಿಸಿದರು. ಕೈಯಲ್ಲಿ ’ಗೋ ಬ್ಯಾಕ್ ವಿಜಯ್’ ಎಂದು ಬರೆದಿರುವ ಫಲಕಗಳನ್ನ ಹಿಡಿದು ಪ್ರತಿಭಟನೆ ನಡೆಸಿದರು.

ಕಾವೇರಿ ಜಲ ವಿವಾದ ಶಾಶ್ವತ ಪರಿಹಾರಕ್ಕಾಗಿ ತಮಿಳ್ ನಾಡು ಸರ್ಕಾರ ಕೂಡಲೇ ಹೆಚ್ಚುವರಿ ಅಣೆಕಟ್ಟೆನ್ನು ಕಟ್ಟಿಕೊಂಡು ನದಿಗೆ ಹೋಗುವ ಕಾವೇರಿ ನೀರನ್ನು ಸಂಗ್ರಹಿಸಿಕೊಳ್ಳಲಿ, ಶೀಘ್ರದಲ್ಲೇ ಕರ್ನಾಟಕದಲ್ಲಿ ಮೇಕೆದಾಟು ಅಣೆಕಟ್ಟೆ ನಿರ್ಮಾಣಗೊಂಡು ನೀರನ್ನು ಸಂಗ್ರಹಿಸಲಿ ಎಂದು ಸಲಹಾ ಆಕ್ರೋಶ ಹೊರ ಹಾಕಿದರು.

ಕಾವೇರಿ ನೀರಿನ ಹಂಚಿಕೆ ಹಾಗೂ ಮೇಕೆದಾಟು ಅಣೆಕಟ್ಟು ವಿವಾದದ ನಡುವೆಯೇ ತಮಿಳುನಾಡು ಮುಖ್ಯಮಂತ್ರಿ ವಿಜಯ್ ವಿರುದ್ಧವೂ ಪ್ರತಿಭಟನೆ ನಡೆದಿದೆ. ಕಾವೇರಿ ನೀರಿನ ವಿಚಾರದಲ್ಲಿ ತಮಿಳುನಾಡು ನಿರಂತರವಾಗಿ ಕರ್ನಾಟಕದ ವಿರುದ್ಧ ಒತ್ತಡ ಹೇರುತ್ತಿದೆ ಇಂತಹ ಸಂದರ್ಭದಲ್ಲಿ ಮಾತುಕತೆ ನಡೆಸುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಕಾವೇರಿ ಕರ್ನಾಟಕದ ಜೀವನಾಡಿ, ಕರ್ನಾಟಕದ ಹಕ್ಕು ಕಾಪಾಡಿ ಎಂಬ ಘೋಷಣೆಗಳನ್ನು ಕೂಗಿದರು.

ಹೆದ್ದಾರಿಯಲ್ಲಿ ಉರುಳು ಸೇವೆ
ಮಂಡ್ಯ ರಕ್ಷಣಾ ವೇದಿಕೆಯ ಅಧ್ಯಕ್ಷ ಶಂಕರ್ ಬಾಬು ಸೇರಿದಂತೆ ಹಲವು ಕಾರ್ಯಕರ್ತರು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಉರುಳು ಸೇವೆ ನಡೆಸಿದರು. ರಸ್ತೆಯಲ್ಲೇ ಉರುಳುತ್ತಾ ತಮಿಳುನಾಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಅಯ್ಯಯ್ಯೋ ಅನ್ಯಾಯ ಎಂದು ಬಾಯಿ ಬಡಿದುಕೊಂಡು ಕರ್ನಾಟಕದ ರೈತರ ಹಿತಾಸಕ್ತಿಯನ್ನ ಕಾಪಾಡುವಂತೆ ಒತ್ತಾಯಿಸಿದರು

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !