August 1, 2026
Saturday, August 1, 2026
spot_img

ಮೊಬೈಲ್ ನೋಡುತ್ತಾ ಆಹಾರ ಸೇವನೆ ದೇಹ, ಮನಸ್ಸು ಎರಡಕ್ಕೂ ಮಾರಕ: ರಾಘವೇಶ್ವರ ಶ್ರೀ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮನುಷ್ಯನ ದೇಹವನ್ನು ಸುಸ್ಥಿತಿಯಲ್ಲಿಡಲು ಆಹಾರ, ನಿದ್ರೆ ಮತ್ತು ಬ್ರಹ್ಮಚರ್ಯ ಎಂಬ ಮೂರು ಅಂಶಗಳು ಪ್ರಮುಖವಾಗಿವೆ. ಈ ಮೂರು ಸಮರ್ಪಕವಾಗಿದ್ದಾಗ ಶರೀರ ಸ್ವಸ್ಥವಾಗಿರಲು ಸಾಧ್ಯ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ’ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಶನಿವಾರ ಪ್ರವಚನ ಅನುಗ್ರಹಿಸಿದ ಶ್ರೀಗಳು, ಇದರ ಜೊತೆಗೆ, ದೇಹವನ್ನು ನಿಲ್ಲಿಸುವ ಪ್ರಧಾನ ಸ್ತಂಭ ’ಕರ್ಮ’ವಾಗಿದೆ. ಕರ್ಮವೇ ಜೀವಿತಾವಧಿಯನ್ನು ನಿರ್ಧರಿಸುತ್ತದೆಯಾದರೂ, ಆಹಾರ, ನಿದ್ರೆ ಮತ್ತು ಬ್ರಹ್ಮಚರ್ಯ ಸರಿಯಾಗಿರದಿದ್ದರೆ ಆರೋಗ್ಯ ಹದಗೆಡುವುದು ಅನಿವಾರ್ಯ ಎಂದು ವಿವರಿಸಿದರು.

ಪ್ರತಿಯೊಂದು ಜೀವಿಯೂ ಸೇವಿಸುವ ಅನ್ನವು ಅನ್ನಪೂರ್ಣೇಶ್ವರಿಯ ಕೃಪೆಯ ಫಲವೇ ಆಗಿದ್ದು, ಕೋಟ್ಯಂತರ ಜೀವಿಗಳಿಗೆ ನಿರಂತರವಾಗಿ ಅನ್ನದ ಭಿಕ್ಷೆಯನ್ನು ನೀಡುತ್ತಿರುವ ಶಕ್ತಿ ದೇವಿಯದ್ದು. ಮಾನವ ದೇಹವು ಅನ್ನದಿಂದಲೇ ರೂಪುಗೊಳ್ಳುತ್ತದೆ. ತಂದೆ, ತಾಯಿ ಸೇವಿಸುವ ಆಹಾರದಿಂದಲೇ ಶಿಶುವಿನ ಜನನವಾಗುತ್ತದೆ. ಹುಟ್ಟಿದ ನಂತರವೂ ದೇಹದ ಜೀವಕೋಶಗಳು ನಿರಂತರವಾಗಿ ನವೀಕರಣಗೊಳ್ಳುತ್ತಿದ್ದು, ಈ ಪ್ರಕ್ರಿಯೆಯ ಮೂಲವೂ ಆಹಾರವೇ ಆಗಿದೆ ಎಂದು ವಿವರಿಸಿದ ಶ್ರೀಗಳು, ಆಹಾರ ಮತ್ತು ಮನಸ್ಸಿನ ನಡುವೆ ಆಪ್ತ ಸಂಬಂಧವಿದೆ. ಯಾವ ರೀತಿಯ ಆಹಾರ ಸೇವಿಸುತ್ತೇವೆಯೋ, ಅದೇ ರೀತಿಯ ಮನೋಭಾವ ಬೆಳೆದು ಬರುತ್ತದೆ. ಸಾತ್ವಿಕ ಆಹಾರವು ಶಾಂತ ಮನಸ್ಸನ್ನು ಬೆಳೆಸಿದರೆ, ಅತಿಯಾದ ಖಾರ, ಹುಳಿ ಹಾಗೂ ಅಸಮತೋಲನ ಆಹಾರ ಮನಸ್ಸಿನ ಮೇಲೂ ಪರಿಣಾಮ ಬೀರುತ್ತದೆ ಎಂದರು.

ನಾವು ಏನು ತಿನ್ನುತ್ತೇವೆ ಎಂಬುದಷ್ಟೇ ಅಲ್ಲ, ಊಟ ಮಾಡುವಾಗ ಏನು ಯೋಚಿಸುತ್ತೇವೆ ಎನ್ನುವುದೂ ಅಷ್ಟೇ ಮುಖ್ಯ. ಆಹಾರ ಸೇವಿಸುವ ಸಮಯದಲ್ಲಿ ದೇವರ ಸ್ಮರಣೆ, ಶಾಂತ ಮನಸ್ಸು ಹಾಗೂ ಕೃತಜ್ಞತೆಯ ಭಾವ ಇರಬೇಕು. ದೂರದರ್ಶನ, ಮೊಬೈಲ್ ಅಥವಾ ಅಶಾಂತ ಚಿಂತನೆಗಳೊಂದಿಗೆ ಊಟ ಮಾಡುವುದರಿಂದ ಆಹಾರದ ಪಾವಿತ್ರ್ಯ ಹಾಳಾಗುತ್ತದೆ ಮಾತ್ರವಲ್ಲ ಅದು ಮನಸ್ಸಿನಮೇಲೂ ಪರಿಣಾಮವನ್ನು ಉಂಟುಮಾಡುತ್ತದೆ ಎಂದು ಎಚ್ಚರಿಸಿದರು.

ನಿದ್ರೆ ದೇವಿಯ ಸ್ವರೂಪ

ಆಯುರ್ವೇದದಲ್ಲಿ ನಿದ್ರೆಯನ್ನು ’ಭೂತಧಾತ್ರಿ’ ಎಂದು ಕರೆಯಲಾಗುತ್ತದೆ. ಅಂದರೆ ಎಲ್ಲಾ ಜೀವಿಗಳನ್ನು ಪೋಷಿಸುವ ತಾಯಿ ಎಂದರ್ಥ. ಸರಿಯಾದ ಸಮಯದಲ್ಲಿ ಬರುವ ನಿದ್ರೆ ದೇಹವನ್ನು ದುರಸ್ತಿ ಮಾಡಿ ಆರೋಗ್ಯವನ್ನು ವೃದ್ಧಿಸುತ್ತದೆ. ಸಮಯಕ್ಕೆ ನಿದ್ರೆ ಮಾಡದೆ, ರಾತ್ರಿ ತಡವಾಗಿ ಮಲಗುವುದು ಹಾಗೂ ಹಗಲಿನಲ್ಲಿ ನಿದ್ರೆ ಮಾಡುವ ಅಭ್ಯಾಸ ಆರೋಗ್ಯಕ್ಕೆ ಹಾನಿಕಾರಕ. ಸರಿಯಲ್ಲದ ಸಮಯದಲ್ಲಿ ಮಾಡುವ ನಿದ್ರೆಯನ್ನು ಆಯುರ್ವೇದದಲ್ಲಿ ’ಕಾಲರಾತ್ರಿ’ಗೆ ಹೋಲಿಸಲಾಗಿದೆ.

ಇಂತಹ ಜೀವನಶೈಲಿ ದೇಹದ ವಾತ, ಪಿತ್ತ ಮತ್ತು ಕಫ ಸಮತೋಲನವನ್ನು ಹಾಳುಮಾಡಿ, ಜೀರ್ಣಕ್ರಿಯೆ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅನ್ನವನ್ನು ದೇವರ ಪ್ರಸಾದವೆಂದು ಗೌರವಿಸುವುದು, ಸಮಯಕ್ಕೆ ಸರಿಯಾಗಿ ಊಟ ಮಾಡುವುದು, ಶಾಂತ ಮನಸ್ಸಿನಿಂದ ಆಹಾರ ಸೇವಿಸುವುದು, ನಿಯಮಿತ ನಿದ್ರೆ ಹಾಗೂ ಶಿಸ್ತಿನ ಜೀವನಶೈಲಿಯೇ ಆರೋಗ್ಯಕರ ಬದುಕಿನ ನಿಜವಾದ ರಹಸ್ಯ ಎಂದು ಶ್ರೀಗಳು ಅಭಿಪ್ರಾಯಪಟ್ಟರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !