September 22, 2026
Tuesday, September 22, 2026
spot_img

EXPLAINER | ಏನಿದು ಎಲ್ಲೆಡೆ ಚರ್ಚೆಗೆ ಕಾರಣವಾದ ಕಸ್ತೂರಿ ರಂಗನ್ ವರದಿ? ಕರಾವಳಿ, ಮಲೆನಾಡಿಗರ ವಿರೋಧ ಯಾಕೆ?

ರಾಜ್ಯದಲ್ಲಿ ಸದ್ಯ ಕಸ್ತೂರಿ ರಂಗನ್‌ ವರದಿಯನ್ನು ಜಾರಿ ಮಾಡಬೇಕಾ ಬೇಡವಾ ಎನ್ನುವ ವಿಷಯ ಮುನ್ನೆಲೆ ಬಂದಿದೆ. ವಿಧಾನಸಭೆಯಲ್ಲಿ ಈ ಬಗ್ಗೆ ಪರ ವಿರೋಧ ಚರ್ಚೆಗಳು ಆರಂಭವಾಗಿದ್ದು, ಮಲೆನಾಡಿಗರು ಹಾಗೂ ಕರಾವಳಿ ಭಾಗದ ಜನರು ವರದಿ ಜಾರಿ ಮಾಡುವುದು ಬೇಡ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಈ ವರದಿ ಏನು? ಹೇಗೆ ಆರಂಭವಾಯ್ತು? ಯಾಕೆ ಬೇಡ ಅಂತಿದ್ದಾರೆ? ಎಲ್ಲ ಮಾಹಿತಿ ಇಲ್ಲಿದೆ ನೋಡಿ..

ಕಸ್ತೂರಿ ರಂಗನ್‌ ವರದಿ ಎಂದರೇನು?

ಪಶ್ಚಿಮ ಘಟ್ಟಗಳ ಪರಿಸರವನ್ನು ಸಂರಕ್ಷಿಲು ಡಾ. ಕೆ. ಕಸ್ತೂರಿ ರಂಗನ್‌ ನೇತೃತ್ವದ ಸಮಿತಿಯು 2013ರಲ್ಲಿ ಕೇಂದ್ರ ಸರ್ಕಾರಕ್ಕೆ ಕಸ್ತೂರಿ ರಂಗನ್‌ ವರದಿ ಮತ್ತು ಪಶ್ಚಿ ಘಟ್ಟ ಸಂರಕ್ಷಣೆ ಎನ್ನುವ ವರದಿಯನ್ನು ನೀಡಿತ್ತು. ಈ ವರದಿಯನ್ನು ಜಾರಿ ಮಾಡಿದರೆ ನಮ್ಮ ಪಶ್ಚಿಮ ಘಟ್ಟಗಳ ಪರಿಸರವನ್ನು ಉಳಿಸಬಹುದು. ಮಾನವನ ಬದುಕು ಮುಂದುವರಿಯಬೇಕು ಎಂದಾದರೆ ಪರಿಸರ ರಕ್ಷಣೆ ಅತ್ಯಗತ್ಯ ಅದರಲ್ಲಿಯೂ ಸೂಕ್ಷ್ಮ ಪ್ರದೇಶವಾದ ಭಾರತದ ಪಶ್ಚಿಮ ಘಟ್ಟಗಳ ಪರಿಸರ ರಕ್ಷಣೆ ಅತಿ ಅಗತ್ಯ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಈ ಕೆಲಸಕ್ಕೆ ಹಿಂದೆ ನೇಮಕವಾಗಿದ್ದ ಗಾಳ್ಗೀಲ್‌ ಸಮಿತಿ ವರದಿಯ ಕುಂದು ಕೊರತೆಯನ್ನು ನೀಗಿಸಲು ಕಸ್ತೂರಿ ರಂಗನ್‌ ವರದಿಯನ್ನು ಸಲ್ಲಿಸಲಾಗಿತ್ತು.

ವರದಿಯಲ್ಲಿ ಏನೆಲ್ಲಾ ಇದೆ?

ಗುಜರಾತ್‌, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಈ ಪಶ್ಚಿಮ ಘಟ್ಟಗಳು ಹರಡಿರುವ 1,64,280 ಚದರ ಕಿಲೋಮೀಟರ್ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಶೇ. 37ರಷ್ಟನ್ನು (ಅಂದರೆ 56,825.8 ಚ.ಕಿ.ಮೀ.) ‘ಪರಿಸರ ಸೂಕ್ಷ್ಮ ಪ್ರದೇಶ’ ಎಂದು ಘೋಷಿಸಲು ಸಮಿತಿ ಶಿಫಾರಸು ಮಾಡಿದೆ. ಕರ್ನಾಟಕದಲ್ಲಿರುವ ಒಟ್ಟು 44,448 ಚ.ಕಿ.ಮೀ. ಪಶ್ಚಿಮ ಘಟ್ಟ ವ್ಯಾಪ್ತಿಯ ಪೈಕಿ ಬರೋಬ್ಬರಿ 20,668 ಚ.ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ತರಲು ಪ್ರಸ್ತಾಪಿಸಲಾಗಿದೆ. ಪರಿಸರ ರಕ್ಷಣೆಯ ದೃಷ್ಟಿಯಿಂದ ಈ ವಲಯದಲ್ಲಿ ಗಣಿಗಾರಿಕೆ, ಕ್ವಾರಿ, ಮರಳುಗಾರಿಕೆ ಹಾಗೂ ಮಾಲಿನ್ಯಕಾರಕ ಕೆಂಪು ವರ್ಗದ ಕೈಗಾರಿಕೆಗಳಿಗೆ ಸಂಪೂರ್ಣ ನಿಷೇಧ ಹೇರಲು ಸೂಚಿಸಲಾಗಿದೆ. ಇದರೊಂದಿಗೆ ಟೌನ್‌ಶಿಪ್‌ಗಳು, ಬೃಹತ್ ಕಟ್ಟಡ ನಿರ್ಮಾಣ, ಉಷ್ಣವಿದ್ಯುತ್, ಜಲವಿದ್ಯುತ್ ಹಾಗೂ ಪವನಶಕ್ತಿ ಯೋಜನೆಗಳಿಗೂ ನಿರ್ಬಂಧ ಹೇರಲು ಶಿಫಾರಸು ಮಾಡಲಾಗಿದ್ದು, ವಾಣಿಜ್ಯ ಪ್ರವಾಸೋದ್ಯಮಕ್ಕೂ ಕಠಿಣ ಕಡಿವಾಣ ಹಾಕಲು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕದ ಯಾವೆಲ್ಲಾ ಜಿಲ್ಲೆಗಳಿಗೆ ಸಮಸ್ಯೆ

ಬೆಳಗಾವಿ
ಉತ್ತರ ಕನ್ನಡ
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ಚಿಕ್ಕಮಗಳೂರು
ಹಾಸನ
ಕೊಡಗು
ಚಾಮರಾಜನಗರ
ಮೈಸೂರು

ರಾಜ್ಯದಲ್ಲಿ ಇದಕ್ಕೆ ವಿರೋಧ ಯಾಕೆ?

ರಾಜ್ಯದ ಒಟ್ಟಾರೆ ಹತ್ತು ಜಿಲ್ಲೆಗಳು ಈ ವರದಿಯನ್ನು ವಿರೋಧ ಮಾಡುತ್ತಿವೆ. ಈ ಜಿಲ್ಲೆಗಳ ಒಟ್ಟಾರೆ ಒಂದೂವರೆ ಸಾವಿರದಷ್ಟು ಹಳ್ಳಿಗಳು ಸೂಕ್ಷ್ಮ ವಲಯ ಪಟ್ಟಿಗೆ ಸೇರುತ್ತವೆ. ಈ ವರದಿ ಇರುವ ಹಾಗೆಯೇ ಜಾರಿಯಾದರೆ ಕರಾವಳಿ ಹಾಗೂ ಮಲೆನಾಡು ಭಾಗದ ಜನರ ಜೀವನಕ್ಕೆ ತೊಂದರೆಯಾಗುತ್ತದೆ. ಸೂಕ್ಷ್ಮ ವಲಯ ಎಂದು ಹಳ್ಳಿಗಳನ್ನು ಡಿಕ್ಲೇರ್‌ ಮಾಡಿದ ನಂತರ ಅಲ್ಲಿ ಮಾನವ ಹಸ್ತಕ್ಷೇಪಕ್ಕೆ ಕಠಿಣ ನಿಯಮಗಳು ಅನ್ವಯವಾಗುತ್ತದೆ. ಕಾಲ ಕಾಲಗಳಿಂದ ಬೆಳೆಯುತ್ತಿದ್ದ ಕೃಷಿ ಭೂಮಿ ಚಟುವಟಿಕೆಗಳು, ತೋಟಗಾರಿಕೆ ಚಟುವಟಿಕೆಗಳು ಹಾಗೂ ಇನ್ನಿತರ ದೈನಿಂದಿನ ಜೀವನೋಪಾಯದ ಕೆಲಸಗಳಿಗೆ ಧಕ್ಕೆ ಉಂಟಾಗುತ್ತದೆ. ಈ ಭಾಗದ ಜನರಿಗೆ ಕಾಫಿ, ರಬ್ಬರ್‌, ಕಾಳುಮೆಣಸು ಜೀವಾಳ. ಈ ಬೆಳೆಗಳಿಗೆ ರಸಗೊಬ್ಬರ, ಕೀಟನಾಶಕ ಬಳಕೆಯ ಮೇಲೆ ನಿರ್ಬಂಧ, ಹೊಸತಾಗಿ ತೋಟ ವಿಸ್ತರಿಸಲು ಅಡ್ಡಿಯಾಗುತ್ತದೆ. ಇದರ ಜೊತೆಗೆ ಸೂಕ್ಷ್ಮ ಪ್ರದೇಶಗಳಲ್ಲಿ ಮನೆ ಹಾಗೂ ಜೀವನ ಕಟ್ಟುಕೊಂಡ ಜನರಿಗೆ ತಮ್ಮನ್ನು ಎತ್ತಂಗಡಿ ಮಾಡುವ ಭಯ ಇದೆ. ಊರಿಗೆ ರಸ್ತೆ, ಸೇತುವೆ, ವಿದ್ಯುತ್‌, ಆಸ್ಪತ್ರೆ ಅಥವಾ ಶಾಲೆಗಳನ್ನು ಕಟ್ಟಲು ಪರಿಸರ ಇಲಾಖೆಯ ಕಠಿಣ ಅನುಮತಿ ಬೇಕಾಗುತ್ತದೆ. ಇಲ್ಲಿ ಹೋಂಸ್ಟೇಗಳು ಹಾಗೂ ಪ್ರವಾಸೋದ್ಯಮಕ್ಕೂ ಬಲವಾದ ಪೆಟ್ಟು ಬೀಳುತ್ತದೆ. ಸ್ಥಳೀಯ ಸ್ಥಿತಿ ಹೇಗಿದೆ? ಭೌಗೋಳಿಕವಾಗಿ ಬದುಕು ಹೇಗಿದೆ ಎನ್ನುವುದನ್ನು ನೋಡದೇ ಉಪಗ್ರಹ ಆಧಾರಿತ ಸಮೀಕ್ಷೆಯನ್ನು ನಂಬಿ ಈ ವರದಿ ತಯಾರಿಸಲಾಗಿದೆ. ಇದು ಅವೈಜ್ಞಾನಿಕ ಎಂದು ಜನ ದೂರಿದ್ದಾರೆ.



Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !