ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರಕಾರದ ಸಚಿವ ಸಂಪುಟದ ಪುನಾರಚನೆ ಪೂರ್ಣಗೊಳ್ಳುತ್ತಿದ್ದಂತೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಭಾರಿ ಅಸಮಾಧಾನ ಸ್ಫೋಟಗೊಳ್ಳಲಿದೆ ಎಂದು ಮಾಜಿ ಸಚಿವ, ಬಿಜೆಪಿ ಉಪಾಧ್ಯಕ್ಷ ಮುರುಗೇಶ್ ನಿರಾಣಿ ಬಾಂಬ್ ಸಿಡಿಸಿದ್ದಾರೆ. ಗದಗದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಪ್ರಮುಖ ಬದಲಾವಣೆಗಳು ನಡೆಯಲಿವೆ ಎಂದು ಭವಿಷ್ಯ ನುಡಿದರು.
ಬಿಜೆಪಿಯತ್ತ ಮುಖ ಮಾಡಲಿದೆಯೇ ಕೈ ಪಡೆ?
ಪ್ರಸ್ತುತ ಕಾಂಗ್ರೆಸ್ ಪಕ್ಷದ ಹಲವು ಪ್ರಭಾವಿ ಶಾಸಕರು ಕಮಲ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. 2028ರ ವಿಧಾನಸಭಾ ಚುನಾವಣೆಯ ವೇಳೆಗೆ ಅಸಮಾಧಾನಿತ ಶಾಸಕರ ದೊಡ್ಡ ಗುಂಪೇ ಬಿಜೆಪಿಗೆ ಸೇರ್ಪಡೆಯಾಗಲಿದೆ. ಈ ರಾಜಕೀಯ ಬೆಳವಣಿಗೆಗಳನ್ನು ಕಾದು ನೋಡಿ ಎಂದು ನಿರಾಣಿ ಸವಾಲು ಹಾಕಿದ್ದಾರೆ.
ಆಕಾಂಕ್ಷಿಗಳ ಸಂಖ್ಯೆ ಹೆಚ್ಚು, ಸ್ಥಾನ ಕಡಿಮೆ!
ಕಾಂಗ್ರೆಸ್ನಲ್ಲಿ ಸಚಿವರಾಗಲು ಸುಮಾರು 60ಕ್ಕೂ ಹೆಚ್ಚು ಶಾಸಕರು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಆದರೆ, ಕೇವಲ 15ರಿಂದ 16 ಜನರಿಗೆ ಮಾತ್ರ ಅವಕಾಶ ನೀಡಲು ಸಾಧ್ಯ. ಇದರಿಂದಾಗಿ ಹಿರಿಯ ನಾಯಕರಿಗೆ ತೀವ್ರ ನಿರಾಶೆಯಾಗುವುದು ಖಚಿತ. ಅಲ್ಲಿನ ವಾಸ್ತವ ಸ್ಥಿತಿ ಹಿರಿಯ ಶಾಸಕರಿಗೆ ಈಗಾಗಲೇ ಅರಿವಾಗಿದೆ ಎಂದು ಅವರು ವ್ಯಂಗ್ಯವಾಡಿದರು.
ಸ್ಥಳೀಯ ನಾಯಕರ ವಿಶ್ವಾಸಕ್ಕೆ ಆದ್ಯತೆ
ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ತೊರೆದು ಬರುವ ನಾಯಕರನ್ನು ಸೇರ್ಪಡೆ ಮಾಡಿಕೊಳ್ಳುವಾಗ, ನಮ್ಮ ಪಕ್ಷದ ಹಾಲಿ ಕಾರ್ಯಕರ್ತರು ಹಾಗೂ ಆಯಾ ಕ್ಷೇತ್ರದ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.



